ಚೀನಾದಲ್ಲಿ ಪ್ರಯಾಣಿಸಿದ ಸೂಪರ್‌ಸ್ಪೀಡ್ ಬುಲೆಟ್ ರೈಲು

Update: 2017-06-26 16:11 GMT

ಬೀಜಿಂಗ್,ಜೂ.26: ತಾಸಿಗೆ 400 ಕಿ.ಮೀ. ಪ್ರಚಂಡವೇಗದಲ್ಲಿ ಚಲಿಸಬಲ್ಲ ಸ್ವದೇಶಿ ನಿರ್ಮಿತ ಬುಲೆಟ್ ರೈಲನ್ನು ಚೀನಾ ಸೋಮವಾರ ಅನಾವರಣಗೊಳಿಸಿದೆ. ದೇಶದ ಅತ್ಯಧಿಕ ರೈಲುಸಂಚಾರ ದಟ್ಟಣೆಯಿರುವ ಬೀಜಿಂಗ್-ಶಾಂಘಾ ರೈಲುಮಾರ್ಗದಲ್ಲಿ ಈ ಅತ್ಯಾಧುನಿಕ ಬುಲೆಟ್ ರೈಲು ಓಡಾಡಲಿದೆ.

   ‘ಫ್ಯುಕ್ಸಿಂಗ್’ ಎಂಬ ಹೆಸರಿನ ಸಿಆರ್400ಎಎಫ್ ಮಾದರಿಯ ಈ ರೈಲು ಸೋಮವಾರ ಬೆಳಗ್ಗೆ ಬೀಜಿಂಗ್‌ನ ದಕ್ಷಿಣ ರೈಲು ನಿಲ್ದಾಣದಿಂದ ಶಾಂಘಾಗೆ ನಿರ್ಗಮಿಸಿತು. ಇದೇ ಸಮಯದಲ್ಲಿ ಸಿಆರ್400 ಎಎಫ್ ಮಾದರಿಯ ಇನ್ನೊಂದು ಬುಲೆಟ್ ರೈಲು ಶಾಂಘಾನ ಹೊಂಗ್‌ಕಿಯೊ ರೈಲು ನಿಲ್ದಾಣದಿಂದ ಶಾಂಘಾಗೆ ನಿರ್ಗಮಿಸಿತು.

  ಶಾಂಘಾ ತಲುಪಲು ಈ ರೈಲಿಗೆ 5 ತಾಸು ಹಾಗೂ 45 ನಿಮಿಷಗಳು ಹಿಡಿಯಿತು. ದಾರಿ ಮಧ್ಯೆ ಅದು 10 ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಗೊಂಡಿತ್ತು.
ಇಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ಸ್ (ಇಎಂಯು) ಎಂದೂ ಕರೆಯಲ್ಪಡುವ ಈ ಬುಲೆಟ್ ರೈಲು ತಾಸಿಗೆ ಗರಿಷ್ಠ 400 ಕಿ.ಮೀ. ವೇಗದಲ್ಲಿ ಹಾಗೂ ತಾಸಿಗೆ 350 ಕಿ.ಮೀ. ಸ್ಥಿರವೇಗದಲ್ಲಿ ಚಲಿಸಬಲ್ಲದು ಎಂದು, ಚೀನಿ ಸರಕಾರಿ ಸ್ವಾಮ್ಯದ ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಬುಲೆಟ್ ರೈಲು ಸಂಚರಿಸಲಿರುವ ಬೀಜಿಂಗ್-ಶಾಂಘಾ ರೈಲು ಮಾರ್ಗದಲ್ಲ್ಲಿ ಪ್ರತಿ ದಿನವೂ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.
 ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆಯನ್ನು ಹೊಂದಿರುವ ಈ ರೈಲು ನಿರಂತರವಾಗಿ ತನ್ನ ಕಾರ್ಯನಿರ್ವಹಣೆಯ ತಪಾಸಣೆ ನಡೆಸಲಿದೆ ಹಾಗೂ ತುರ್ತುಪರಿಸ್ಥಿತಿ ಅಥವಾ ಅಸಹಜ ಸನ್ನಿವೇಶಗಳಲ್ಲಿ ಈ ರೈಲು ತನ್ನಿಂತಾನೆ ಕಡಿಮೆ ವೇಗದಲ್ಲಿ ಚಲಿಸತೊಡಗುತ್ತದೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News