ಸರಕಾರದ ಮೇಲೆ ಯಾವುದೇ ಕಳಂಕವಿಲ್ಲ ಎನ್ನುವ ಮೋದಿ ವ್ಯಾಪಮ್, ಮಲ್ಯ ಬಗ್ಗೆ ಮಾತನಾಡಲಿ: ಕಾಂಗ್ರೆಸ್

Update: 2017-06-26 18:09 GMT

ಹೊಸದಿಲ್ಲಿ, ಜೂ.26: ಮೂರು ವರ್ಷದ ಆಡಳಿತಾವಧಿಯಲ್ಲಿ ಕೇಂದ್ರ ಸರಕಾರದ ಮೇಲೆ ಯಾವುದೇ ಕಳಂಕವಿಲ್ಲ ಎಂದು ವಿದೇಶದಲ್ಲಿ ಬಡಾಯಿಕೊಚ್ಚಿಕೊಳ್ಳುವ ಪ್ರಧಾನಿ ಮೋದಿ , ಬಿಜೆಪಿ ಆಡಳಿತ ಇರುವ ರಾಜ್ಯದಲ್ಲಿ ನಡೆದ ‘ವ್ಯಾಪಮ್ ’ ಹಗರಣ, ಲಲಿತ್ ಮೋದಿ, ವಿಜಯ್ ಮಲ್ಯ ಭಾರತದಿಂದ ಪರಾರಿಯಾದ ಬಗ್ಗೆ ಯಾಕೆ ಬಾಯಬಿಡುತ್ತಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದೀಗ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ವಿದೇಶದಲ್ಲಿ ಭಾರತದ ವಿರೋಧ ಪಕ್ಷಗಳನ್ನು ತೆಗಳುತ್ತಾ ಸಾರ್ವಜನಿಕ ಸಭೆಯಲ್ಲಿ ಚುನಾವಣಾ ಪ್ರಚಾರ ಸಭೆಯ ರೀತಿ ಭಾಷಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

    ವ್ಯಾಪಮ್ ಹಗರಣ, ಗುಜರಾತ್‌ನ ಜಿಎಸ್‌ಪಿಸಿ ಹಗರಣ, ಛತ್ತೀಸ್‌ಗಡದ ಪಿಡಿಎಸ್ ಹಗರಣ, ಸಹಾರಾ ಡೈರಿಯಲ್ಲಿ ತನ್ನ (ಮೋದಿಯವರ) ಹೆಸರು ಉಲ್ಲೇಖಿಸಲ್ಪಟ್ಟಿರುವುದು, ಗುಜರಾತ್‌ನಲ್ಲಿ ಅನರ್ ಪಟೇಲ್ ನಡೆಸಿದ ಭೂಹಗರಣ ಇವನ್ನೆಲ್ಲಾ ಪ್ರಧಾನಿ ಮರೆತು ಬಿಟ್ಟರೇ ಎಂದು ಕಾಂಗ್ರೆಸ್ ಪ್ರಧಾನ ವಕ್ತಾರ ರಣ್‌ದೀಪ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

   ಅಮೆರಿಕದ ವರ್ಜಿನಿಯದಲ್ಲಿ ಭಾರತೀಯ-ಅಮೆರಿಕನ್ನರ ಸಭೆಯಲ್ಲಿ ಮಾತನಾಡಿದ್ದ ಮೋದಿ, ಮೂರು ವರ್ಷದ ಆಡಳಿತಾವಧಿಯಲ್ಲಿ ಎನ್‌ಡಿಎ ಸರಕಾರದ ಮೇಲೆ ಒಂದು ಸಣ್ಣ ಕಳಂಕವೂ ತಗಲಿಲ್ಲ ಎಂದಿದ್ದರಲ್ಲದೆ, ವ್ಯಾಪಕ ಭ್ರಷ್ಟಾಚಾರದ ಕಾರಣ ಜನತೆ ಈ ಹಿಂದಿನ ಸರಕಾರವನ್ನು ಸೋಲಿಸಿದ್ದರು ಎಂದಿದ್ದರು.

ಟ್ರಂಪ್‌ರನ್ನು ಭೇಟಿಯಾಗುವ ಸಂದರ್ಭ ಮೋದಿ ಎಚ್-1ಬಿ ವೀಸ ಪ್ರಕರಣ, ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ, ಭಾರತೀಯ ಮೇಲೆ ಅಮೆರಿಕ ಮತ್ತಿತರ ದೇಶಗಳಲ್ಲಿ ನಡೆಯುತ್ತಿರುವ ಜನಾಂಗೀಯ ದ್ವೇಷದ ಹಲ್ಲೆ ಪ್ರಕರಣ, ಅಮೆರಿಕ ನೀಡುತ್ತಿರುವ ನೆರವನ್ನು ದುರುಪಯೋಗಪಡಿಸಿಕೊಂಡಿರುವ ಪಾಕ್ ಅದನ್ನು ಭಾರತ ವಿರೋಧಿ ಕೃತ್ಯ ನಡೆಸುತ್ತಿರುವ ಸಂಘಟನೆಗಳಿಗೆ ನೀಡುತ್ತಿರುವುದು- ಇತ್ಯಾದಿ ವಿಷಯಗಳನ್ನು ಪ್ರಸ್ತಾವಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

    ಪ್ರಧಾನಿ ಮೋದಿ ತನ್ನ 64ನೇ ವಿದೇಶ ಪ್ರವಾಸದಲ್ಲಿದ್ದಾರೆ. ದುರದೃಷ್ಟವಶಾತ್, ವಿಪಕ್ಷಗಳನ್ನು ವಿದೇಶದ ನೆಲದಲ್ಲಿ ದೂರುವುದೇ ಈ ಸರಕಾರದ ವಿದೇಶ ನೀತಿಯಾಗಿದೆ. ಈ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವುದು ಮತ್ತು ಯುಪಿಎ ಸರಕಾರ ಕೈಗೊಂಡ ಅಭಿವೃದ್ಧಿ ಕಾರ್ಯದ ಹೆಗ್ಗಳಿಕೆಯನ್ನು ಪಡೆಯುವುದು- ಎನ್‌ಡಿಎ ಸರಕಾರದ ಕಾರ್ಯವೈಖರಿಯಾಗಿದೆ ಎಂದು ರಣ್‌ದೀಪ್ ಸುರ್ಜೆವಾಲಾ ಹೇಳಿದ್ದಾರೆ.

ಮೋದೀಜಿ.. ನೀವು ಆರೆಸ್ಸೆಸ್ ಅಥವಾ ಬಿಜೆಪಿಯ ಪ್ರಧಾನಿಯಲ್ಲ, ದೇಶದ ಪ್ರಧಾನಿಯಾಗಿದ್ದೀರಿ ಎಂಬುದು ನೆನಪಿರಲಿ. ವಿದೇಶದಲ್ಲಿ ದೇಶದ ವಿರೋಧ ಪಕ್ಷಗಳನ್ನು ಟೀಕಿಸುವುದು ಪ್ರಧಾನಿಯ ಡಿಎನ್‌ಎ ಆಗಿದೆ. ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ನೀವು ವಿದೇಶದಲ್ಲಿ ಪ್ರಸ್ತಾವಿಸಬೇಕೆಂಬುದು ಜನರ ಆಶಯವಾಗಿದೆ ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News