ಬಡ ಮುಸ್ಲಿಂ ಕುಟುಂಬಕ್ಕೆ ವಿಶೇಷ ಈದ್ ಉಡುಗೊರೆ ನೀಡಿದ ಪ್ರಕಾಶ್ ರೈ
ಹೈದರಾಬಾದ್, ಜೂ. 27: ಈದ್ ಸಹೋದರತೆ, ಸಮಾನತೆ ಹಾಗೂ ಸಹಬಾಳ್ವೆಯ ಸಂದೇಶ ಸಾರುವ ಹಬ್ಬ. ಈ ಸುದಿನದಂದು ಜನಪ್ರಿಯ ನಟ ಪ್ರಕಾಶ್ ರೈ ಬಡ ಕುಟುಂಬವೊಂದರ ಮೊಗದಲ್ಲಿ ಸಂತಸದ ನಗೆ ಮೂಡುವಂತೆ ಮಾಡಿದ್ದಾರೆ.
ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಮಹದಾಸೆಯಿಂದ ಪ್ರಕಾಶ್ ರಾಜ್ ಫೌಂಡೇಶನ್ ಸ್ಥಾಪಿಸಿರುವ ನಟ ಈ ಸಂಸ್ಥೆಯ ಮೂಲಕ ತಾವು ದತ್ತು ತೆಗೆದುಕೊಂಡಿರುವ ತೆಲಂಗಾಣದ ಕೊಂಡಾರೆಡ್ಡಿ ಗ್ರಾಮದ ಛೋಟೆ ಮಿಯಾ ಅವರ ಮುರುಕಲು ಮನೆಯನ್ನು ನೋಡಿ ರೂ 4 ಲಕ್ಷ ವೆಚ್ಚದಲ್ಲಿ ಅದನ್ನು ದುರಸ್ತಿಗೊಳಿಸಿ ಹೊಸ ಮನೆಯನ್ನಾಗಿ ಮಾಡಿ ಈದ್ ದಿನ ಉಡುಗೊರೆ ನೀಡಿದ್ದಾರೆ.
ಇಡೀ ಗ್ರಾಮಕ್ಕೆ ಗ್ರಾಮವೇ ಅವರ ಈ ಸಮಾಜ ಸೇವಾ ಕೈಂಕರ್ಯದಿಂದ ಖುಷಿ ಪಟ್ಟಿದೆ.
ನಟ ಟ್ವಿಟ್ಟರಿನಲ್ಲಿ ಪೋಸ್ಟ್ ಒಂದನ್ನು ಮಾಡಿ ‘‘ ಈದುಲ್ ಫಿತ್ರ್ ನ್ನು ಕೊಂಡರೆಡ್ಡಿಪಳ್ಳಿ ಗ್ರಾಮದಲ್ಲಿ ಆಚರಿಸಿದೆ. ಪ್ರಕಾಶ್ ರಾಜ್ ಫೌಂಡೇಶನ್ ನಿರ್ಮಿಸಿದ ಮನೆಯನ್ನು ಕುಟುಂಬವೊಂದಕ್ಕೆ ಹಸ್ತಾಂತರಿಸಿದೆ. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವುದರಲ್ಲಿ ಸಂತಸ’’ ಎಂದು ಬರೆದಿದ್ದಾರೆ.