ಅಂತಾರಾಜ್ಯ ನದಿ ಜೋಡಣೆಗೆ ಒತ್ತು ನೀಡಲು ಪ್ರಧಾನಿಗೆ ಡಿಎಂಕೆ ಆಗ್ರಹ
Update: 2017-06-27 19:38 IST
ಚೆನ್ನೈ,ಜೂ.27: ಅಂತಾರಾಜ್ಯ ನದಿ ಜೋಡಣೆಯಿಂದಾಗಿ ದೇಶಾದ್ಯಂತದ ರೈತರಿಗೆ ಲಾಭವಾಗುವುದರಿಂದ ಈ ಯೋಜನೆಗೆ ಹೆಚ್ಚಿನ ಒತ್ತನ್ನು ನೀಡುವಂತೆ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ಯೋಜನೆಯು ಅಂತಾರಾಜ್ಯ ಜಲವಿವಾದಗಳು ಸೇರಿದಂತೆ ಹಲವಾರು ವಿವಾದಗಳನ್ನು ಬಗೆಹರಿಸಲು ನೆರವಾಗಲಿದೆ ಎಂದೂ ಸ್ಟಾಲಿನ್ ಮಂಗಳವಾರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ನದಿ ಜೋಡಣೆ ಕಾರ್ಯಕ್ರಮಕ್ಕೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಮತ್ತು ಅದನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಳ್ಳಬೇಕು. ಈ ಯೋಜನೆಯು ರಾಷ್ಟ್ರೀಯ ಅಖಂಡತೆಯನ್ನು ಇನ್ನಷ್ಟು ಬಲಗೊಳಿಸುವ ಜೊತೆಗೆ ರಾಷ್ಟ್ರೀಯ ಅಭಿವೃದ್ಧಿ ಮತ್ತು ರಾಷ್ಟ್ರೀಯ ಆರ್ಥಿಕತೆಗೂ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.