ದ್ವೇಷ ಕಾರುವ ಟ್ರೋಲ್ ಗಳನ್ನು ಬ್ಲಾಕ್ ಮಾಡಿ, "ವಾರ್ತಾ ಭಾರತಿ"ಯನ್ನಲ್ಲ: ಫೇಸ್ ಬುಕ್ ಗೆ ರವೀಶ್ ಕುಮಾರ್

Update: 2017-06-27 15:32 GMT

ಹೊಸದಿಲ್ಲಿ, ಜೂ. 27: ಈಗ ದೇಶದಲ್ಲಿ ಭಯದ ರಾಷ್ಟ್ರೀಯ ಯೋಜನೆಯನ್ನು ಸಂಪೂರ್ಣ ರಾಜಕೀಯ ಬೆಂಬಲದಿಂದ ಕಾರ್ಯಗತಗೊಳಿಸಲಾಗಿದೆ. ಇದರ ಭಾಗವಾಗಿ ಪರ್ಯಾಯ ಮಾಧ್ಯಮಗಳ ಮೇಲೆ ಆಕ್ರಮಣ ನಡೆಯುತ್ತಿವೆ ಎಂದು ಖ್ಯಾತ ಪತ್ರಕರ್ತ, ಎನ್ ಡಿಟಿವಿ ಇಂಡಿಯಾದ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ಹೇಳಿದ್ದಾರೆ.

ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರವೀಶ್ ಕುಮಾರ್ , "ವಾರ್ತಾ ಭಾರತಿ" ವಿರುದ್ಧ ಫೇಸ್ ಬುಕ್ ನಲ್ಲಿ ನಡೆಯುತ್ತಿರುವ ದ್ವೇಷ ಅಭಿಯಾನ ಹಾಗೂ ಅದಕ್ಕೆ ಫೇಸ್ ಬುಕ್ ವಾರ್ತಾ ಭಾರತಿಯನ್ನೇ ಬ್ಲಾಕ್ ಮಾಡಿದ್ದನ್ನು ಉಲ್ಲೇಖಿಸಿ ಮಾತನಾಡಿದರು. 

"ನೀವು ಸರ್ಕಾರವನ್ನು ಹೊಗಳುವ ಕೆಲಸ ಬಿಟ್ಟು ಪತ್ರಕರ್ತರ ಕೆಲಸ ಮಾಡಿದರೆ ನಿಮ್ಮ ಮೇಲೆ ಮೊದಲು ಸಂಶಯ ವ್ಯಕ್ತಪಡಿಸಿ, ಮತ್ತೆ ದಾಳಿ ನಡೆಸುತ್ತಾರೆ.  ಕರ್ನಾಟಕ ಪ್ರಮುಖ ದಿನಪತ್ರಿಕೆ "ವಾರ್ತಾ ಭಾರತಿ" ವಿರುದ್ಧ ಟ್ರೋಲ್ ಗಳು ದ್ವೇಷ ಅಭಿಯಾನ ನಡೆಸಿವೆ. ಆದರೆ ಫೇಸ್ ಬುಕ್ "ವಾರ್ತಾ ಭಾರತಿ"ಯನ್ನೇ ಬ್ಲಾಕ್ ಮಾಡಿದೆ. 15 ವರ್ಷಗಳಿಂದ ವಸ್ತುನಿಷ್ಠ ಪತ್ರಿಕೋದ್ಯಮ ನಡೆಸಿರುವ ಪ್ರಮುಖ ಪತ್ರಿಕೆಯೊಂದರ ವಿರುದ್ಧ ದ್ವೇಷ ಕಾರುವ ಟ್ರೋಲ್ ಗಳನ್ನು ಬ್ಲಾಕ್ ಮಾಡುವ ಬದಲು ಫೇಸ್ ಬುಕ್ ವಾರ್ತಾ ಭಾರತಿಯನ್ನೇ ಬ್ಲಾಕ್ ಮಾಡಿದೆ.

ಪತ್ರಿಕೆಯ ಪ್ರಧಾನ ಸಂಪಾದಕರು ಫೇಸ್ ಬುಕ್ ಗೆ ಈ ಬಗ್ಗೆ ಪತ್ರ ಬರೆದರೆ ಅದನ್ನೂ ಫೇಸ್ ಬುಕ್ ಗಣನೆಗೆ ತೆಗೆದುಕೊಂಡಿಲ್ಲ. ಈಗ ಈ ಪರ್ಯಾಯ ಮಾಧ್ಯಮಗಳು, ವೆಬ್ ಸೈಟ್ ಗಳು ನಮ್ಮ ಭರವಸೆಗಳಾಗಿವೆ. ಇವುಗಳಿಂದಾಗಿ ಲಕ್ಷಾಂತರ ಜನರಿಗೆ ಸತ್ಯ ತಲುಪುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇವುಗಳ ಮೇಲೆ ದಾಳಿ ನಡೆಯಲಿದೆ. ಇದು ಸುಮ್ಮನೆ ನಡೆಯುತ್ತಿಲ್ಲ. ಸಂಪೂರ್ಣ ರಾಜಕೀಯ ತಯಾರಿ, ಬೆಂಬಲದಿಂದ ನಡೆಯುತ್ತಿದೆ. ಇಲ್ಲಿ ಸರಕಾರದ ಗುಣಗಾನ ಮಾಡುವ ಪತ್ರಕರ್ತರಿಗೆ ಮಾತ್ರ ಸಂಪೂರ್ಣ ಸುರಕ್ಷತೆ ಇದೆ " ಎಂದು ರವೀಶ್ ಕುಮಾರ್ ಹೇಳಿದರು.

"ಕರ್ನಾಟಕದ ಸ್ಪೀಕರ್ ಪತ್ರಕರ್ತರ ವಿರುದ್ಧ ಬಂಧನದ ಆದೇಶ ನೀಡಿದ್ದನ್ನು ನಾವು ನೋಡಿದ್ದೇವೆ. ಈಗ ಅತ್ಯಂತ ಮಹತ್ವದ ಹುದ್ದೆಯಾದ ಲೋಕಸಭೆಯ ಸ್ಪೀಕರ್ ಸ್ಥಾನದಲ್ಲಿರುವವರೇ ( ಸುಮಿತ್ರಾ ಮಹಾಜನ್ ) ಪತ್ರಕರ್ತರು "ಅಪ್ರಿಯ ಸತ್ಯ" ಹೇಳಬಾರದು ಎಂದು ಫರ್ಮಾನು ಹೊರಡಿಸಿದ್ದಾರೆ. ಸರಕಾರದ ಜೊತೆ ಪ್ರೀತಿಯಿಂದ ಮಾತನಾಡಿ ಎಂದು ಅವರು ಕರೆ ಕೊಟ್ಟಿದ್ದಾರೆ. ಅಂದರೆ ನಮ್ಮನ್ನು ನಾರದ ಮಾಡಲು ಅವರು ಹೊರಟಿದ್ದಾರೆ. ಆದರೆ ನಾವು ನಾರದರಾಗಬೇಕಾದರೆ ಈಗ ಇಂದ್ರನ ದರ್ಬಾರಿನಲ್ಲಿರುವ ದೇವತೆಗಳು ಯಾರು ? ಅಂತಹ ಅರ್ಹತೆ ಇರುವವರು ಇಲ್ಲಿ ಯಾರಿದ್ದಾರೆ ? ಈಗ ಯಾವುದು ಸತ್ಯ, ಯಾವುದು ಅಪ್ರಿಯ ಎಂದು ಸರಕಾರ ನಿರ್ಧರಿಸುತ್ತಿದೆ. ಇನ್ನು ಈ ಬೆದರಿಕೆಯ ಯೋಜನೆಗಳು ಯಾವುದೇ ಹಿಂಜರಿಕೆ ಇಲ್ಲದೆ ಖುಲ್ಲಂಖುಲ್ಲಾ ನಡೆಯಲಿವೆ. ಹೆಚ್ಚಾಗಲಿವೆ ಎಂದು ರವೀಶ್ ಹೇಳಿದ್ದಾರೆ. 

ಇಡೀ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ ಇವರ ಕೆಲಸ ಈಗ ಮುಗಿದಿದೆ. ಯಾರನ್ನು ಬೇಕಾದರೂ ಕೊಲ್ಲಲು ನಿಮ್ಮನ್ನು ಬಳಸುವ ದಿನ ಇನ್ನು ದೂರವಿಲ್ಲ. ತಮ್ಮ ಮೇಲೆ ಹಲ್ಲೆ ನಡೆಯುತ್ತಿದ್ದರೆ ಅದರ ವಿರುದ್ಧ ಹೇಳಿಕೆ ನೀಡಲು ಐಪಿಎಸ್ ಅಧಿಕಾರಿಗಳೇ ಹಿಂಜರಿಯುಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ರೈಲಿನಲ್ಲಿ ಪ್ರಯಾಣಿಸುವ ಮುಸ್ಲಿಮರು ಬುರ್ಖಾ ಧರಿಸಲು , ಊಟಕ್ಕೆ ಮೊಟ್ಟೆಯನ್ನೂ ತೆಗೆದುಕೊಂಡು ಹೋಗಲು ಹೆದರುತ್ತಿದ್ದಾರೆ. ಒಟ್ಟಿನಲ್ಲಿ ಇಲ್ಲಿ ಭಯದ ರಾಷ್ಟ್ರೀಕರಣವಾಗಿದ್ದು ಎಲ್ಲರನ್ನೂ ಕೊಲೆಗಡುಕರನ್ನಾಗಿಸುವ ಕೆಲಸವಾಗುತ್ತಿದೆ ಎಂದು ರವೀಶ್ ಹೇಳಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News