ಪಾಕ್ ಪರ ಘೋಷಣೆ ಕೂಗಿದ ಆರೋಪ: ಪೊಲೀಸರೇ ಹೆಣೆದ ಸಂಚು; ‘ದೂರು ನೀಡಿದ’ ವ್ಯಕ್ತಿಯ ಹೇಳಿಕೆ

Update: 2017-06-27 15:19 GMT

ಭೋಪಾಲ್, ಜೂ.27: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಗೆದ್ದಾಗ ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ಪಾಕ್ ಪರ ಘೋಷಣೆ ಕೂಗಿ ಸಂಭ್ರಮಿಸಿದರು ಎಂಬ ಆರೋಪದಲ್ಲಿ ಪೊಲೀಸರು ಮಧ್ಯಪ್ರದೇಶದ ಮೊಹಾದ್ ಗ್ರಾಮದ 15 ಮುಸ್ಲಿಮರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಅವರನ್ನು ಜೈಲಿಗಟ್ಟಿದ್ದರು. ಸುಭಾಷ್ ಕೋಲಿ ದೂರು ನೀಡಿದವರು ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿತ್ತು. ಆದರೆ ತಾನು ಈ ರೀತಿಯ ದೂರು ನೀಡಲೇ ಇಲ್ಲ ಎಂದು ಸುಭಾಷ್ ಹೇಳಿದ್ದಾರೆ. ಕೆಲವು ಕಿಡಿಗೇಡಿಗಳು ಪಟಾಕಿ ಸಿಡಿಸಿದ್ದರು. ಆದರೆ ಅಂದು - ಭಾರತ್ ಮಾತಾಕಿ ಜೈ, ವಂದೇ ಮಾತರಂ- ಎಂಬ ಘೋಷಣೆ ಮಾತ್ರ ಮೊಳಗಿತ್ತು . ಪಾಕ್ ಪರ ಘೋಷಣೆಯನ್ನು ಯಾರೂ ಕೂಗಲಿಲ್ಲ. ಅಲ್ಲದೆ ಸಿಹಿತಿಂಡಿ ಕೂಡಾ ಹಂಚಿಲ್ಲ ಎಂದಿರುವ ಅವರು, ತನ್ನನ್ನು ನ್ಯಾಯಾಲಯದ ಒಳಗೆಯೂ ಪೊಲೀಸರು ಬೆದರಿಸಿದ್ದಾರೆ ಎಂದು ಹೇಳಿದ್ದಾರೆ.

ಜೂನ್ 18ರ ರಾತ್ರಿ ತಾನು ಪೊಲೀಸ್ ಠಾಣೆಗೆ ಹೋದದ್ದು ನಿಜ. ಆದರೆ ದೂರು ನೀಡಲು ಅಲ್ಲ, ಪೊಲೀಸರು ವಿನಾಕಾರಣ ಬಂಧಿಸಿ ಸೆರೆಯಲ್ಲಿಟ್ಟಿದ್ದ ತನ್ನ ಗ್ರಾಮದ ಮುಸ್ಲಿಮ್ ಯುವಕನನ್ನು ಬಿಡುಗಡೆ ಮಾಡುವಂತೆ ಪೊಲೀಸರನ್ನು ವಿನಂತಿಸಲು ತೆರಳಿದ್ದೆ. ಪೊಲೀಸರು ಬಂಧಿಸಿದ್ದ ಆನಿಸ್ ಎಂಬ ಯುವಕನಿಗೆ ಅಂದಿನ ಪಂದ್ಯದಲ್ಲಿ ಯಾರು ಗೆದ್ದರು ಎಂಬುದೂ ತಿಳಿದಿರಲಿಲ್ಲ. ಆತನ ಹೆಸರು ಕೇಳಿದ ಬಳಿಕ ಪೊಲೀಸರು ಬಂಧಿಸಿದ್ದಾರೆ ಎಂದು ಸುಭಾಷ್ ಹೇಳಿದ್ದಾರೆ.

 ತನ್ನ ಹೆಸರು ಸುಭಾಷ್ ಎಂದು ಹೇಳಿದಾಕ್ಷಣ ಪೊಲೀಸರು ಕೆನ್ನೆಗೆ ಬಾರಿಸಿ ಮೊಬೈಲ್ ಫೋನ್ ಕಿತ್ತುಕೊಂಡರು. ಬಳಿಕ ತನ್ನ ಹೆಸರು ಸುಭಾಷ್ ಎಂದು ಹೇಳಿಕೊಂಡ ಆ ಪೊಲೀಸ್ ತನ್ನ ಫೋನಿನ ಮೂಲಕ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ದಾಖಲಿಸಿದ್ದಾನೆ. ಕರೆ ಮಾಡಿದ ಸ್ಥಳವನ್ನು ಪತ್ತೆಹಚ್ಚಿದರೆ ಸತ್ಯಾಂಶ ತಿಳಿಯುತ್ತದೆ ಎಂದು ಸುಭಾಷ್ ಹೇಳುತ್ತಾರೆ.

 ನೆರೆಮನೆಯ ಯುವಕನ ಬಿಡುಗಡೆಗೆ ಅಗತ್ಯವಿದೆ ಎಂದುಕೊಂಡು ತಾನು ಕಾಗದವೊಂದಕ್ಕೆ ಸಹಿ ಹಾಕಿದ್ದೆ. ಆದರೆ ಆ ಕಾಗದದಲ್ಲಿ ತನ್ನ ಹೆಸರಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದವರು ಆರೋಪಿಸಿದ್ದಾರೆ.

 ಆದರೆ ಗ್ರಾಮದಲ್ಲಿ ಪಟಾಕಿ ಸಿಡಿಸಿದ್ದು ನಿಜ. ಜೂನ್ 18ರಂದು ಪೊಲೀಸರ ತಂಡವೊಂದು ಗ್ರಾಮಕ್ಕೆ ಭೇಟಿ ನೀಡಿದಾಗಲೂ ಪಟಾಕಿ ಸಿಡಿಸುವ ಸದ್ದು ಕೇಳಿಸಿತ್ತು ಎಂದು ಬರ್ಹಾನ್‌ಪುರದ ಉನ್ನತ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಅದಾಗ್ಯೂ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ನಮ್ಮ ಅರಿವಿಗೆ ಬಾರದ ಘಟನೆಯ ಬಗ್ಗೆ ಮಾಹಿತಿ ದೊರೆತರೆ ಆ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದವರು ತಿಳಿಸಿದ್ದಾರೆ.

 ಆರಂಭದಲ್ಲಿ ಪೊಲೀಸರು ಬಂಧಿತ 15 ಮಂದಿಯ ವಿರುದ್ಧ ದೇಶದ್ರೋಹದ ಆರೋಪ ದಾಖಲಿಸಿದ್ದರು. ಈ ಆರೋಪದಡಿ ಬಂಧಿಸಲ್ಪಟ್ಟವರು ದೋಷಿಗಳೆಂದು ಸಾಬೀತಾದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಬಳಿಕ ವಿವಿಧೆಡೆಯಿಂದ ಒತ್ತಡ ಬಂದ ಬಳಿಕ ರಾಜ್ಯ ಸರಕಾರ ದೇಶದ್ರೋಹ ಆರೋಪ ಕೈಬಿಟ್ಟು, ಕೋಮು ಸೌಹಾರ್ದತೆಗೆ ದಕ್ಕೆ ತಂದಿರುವ ಆರೋಪ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News