ಮಾನಸಿಕ ಅಸ್ವಸ್ಥೆಯನ್ನು ಟ್ರ್ಯಾಕ್ಟರ್ ಗೆ ಕಟ್ಟಿ ಹಾಕಿ ಥಳಿಸಿ ಕೊಂದ ಗುಂಪು
ಪಶ್ಚಿಮ ಬಂಗಾಳ, ಜೂ.27: ಮಕ್ಕಳ ಅಪಹರಣ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಗುಂಪೊಂದು ಮಾನಸಿಕ ಅಸ್ವಸ್ಥ ಮಹಿಳೆಯನ್ನು ಕೊಲೆಗೈದಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಮಿತಿಪುರ್-ಪನಾನಗರ್ ನಿವಾಸಿಯಾಗಿರುವ ಒತೆರಾ ಬೀಬಿ ವರ್ಷಗಳಿಂದೀಚಿಗೆ ಮಾನಸಿಕ ತಜ್ಞರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಒತೆರಾ ದಿಲೀಪ್ ಘೋಶ್ ಎನ್ನುವವರ ಮನೆಗೆ ಯಾವುದೇ ವಸ್ತುವನ್ನು ಹಿಡಿದುಕೊಂಡು ಪ್ರವೇಶಿಸಿದ್ದರು. ಆದರೆ ಮಗುವನ್ನು ಅಪಹರಿಸುವ ಸಲುವಾಗಿ ಕೈಯಲ್ಲಿ ಕ್ಲೋರೋಫಾಮ್ ನೊಂದಿಗೆ ಮಹಿಳೆ ಮನೆಯೊಳಕ್ಕೆ ನುಗ್ಗಿದ್ದಾಳೆ ಎನ್ನುವ ವದಂತಿ ಹಬ್ಬಿತ್ತು. ಈ ಸಂದರ್ಭ ಉದ್ರಿಕ್ತ ಗುಂಪು ಅಲ್ಲಿಗೆ ಆಗಮಿಸಿ ಮಹಿಳೆಯನ್ನು ಸುತ್ತುವರಿದಿತ್ತು.
“ಉದ್ರಿಕ್ತ ಗುಂಪು ಮಹಿಳೆಯನ್ನು ನಿರ್ದಯವಾಗಿ ಥಳಿಸಿತು. ಆಕೆ ಏನೋ ಹೇಳಲು ಪ್ರಯತ್ನಿಸುತ್ತಿದ್ದಳು. ಆದರೆ ನಮಗದು ಅರ್ಥವಾಗಲಿಲ್ಲ. ಆಕೆ ಬಾಂಗ್ಲಾದೇಶದಿಂದ ಬಂದಾಕೆ ಎಂದು ಹಲ್ಲೆ ನಡೆಸುತ್ತಿದ್ದವರು ಭಾವಿಸಿದರು. ಕೆಲವರು ಬಟ್ಟೆಯನ್ನು ಹರಿದು ಹಾಕಿದರು. ನಂತರ ಮಹಿಳೆಯನ್ನು ಟ್ರ್ಯಾಕ್ಟರ್ ಗೆ ಕಟ್ಟಿ 3 ಗಂಟೆಗಳ ಕಾಲ ಹಲ್ಲೆ ನಡೆಸಿದರು” ಎಂದು ಸ್ಥಳೀಯರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ,
ಈ ಸಂದರ್ಭ ಕೆಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಉದ್ರಿಕ್ತ ಗುಂಪು ಅವರನ್ನು ತಡೆಯಿತು, ಕೊನೆಗೂ ಪೊಲೀಸರು ಆಕೆಯನ್ನು ರಕ್ಷಿಸುವ ಹೊತ್ತಿಗೆ ಒತೆರಾ ಹಲ್ಲೆಯಿಂದ ಕುಸಿದು ಮೃತಪಟ್ಟಿದ್ದರು.