×
Ad

ಏಷ್ಯಾಕಪ್‌ಗೆ ಹಾಕಿ ಗೋಲ್‌ಕೀಪರ್ ಶ್ರೀಜೇಶ್ ಅಲಭ್ಯ

Update: 2017-06-27 22:28 IST

 ಹೊಸದಿಲ್ಲಿ, ಜೂ.27: ಭಾರತದ ನಂ.1 ಹಾಕಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಮಂಡಿ ನೋವಿನ ಹಿನ್ನೆಲೆಯಲ್ಲಿ ಕನಿಷ್ಠ ಐದು ತಿಂಗಳ ಕಾಲ ಸ್ಪರ್ಧಾತ್ಮಕ ಟೂರ್ನಿಗಳಿಂದ ಹೊರಗುಳಿಯಲಿದ್ದು, ಈ ವರ್ಷದ ಅಕ್ಟೋಬರ್‌ನಲ್ಲಿ ಢಾಕಾದಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲೂ ಆಡುವ ಸಾಧ್ಯತೆಯಿಲ್ಲ.

 ಇತ್ತೀಚೆಗೆ ಲಂಡನ್‌ನಲ್ಲಿ ಕೊನೆಗೊಂಡಿರುವ ಹಾಕಿ ವಿಶ್ವ ಲೀಗ್ ಸೆಮಿಫೈನಲ್‌ನಲ್ಲಿ ಆಡುವುದರಿಂದ ವಂಚಿತರಾಗಿದ್ದ ಶ್ರೀಜೇಶ್ ಮುಂಬೈನಲ್ಲಿ ಈ ತಿಂಗಳಾರಂಭದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವರ್ಷದ ಮೇನಲ್ಲಿ ಸುಲ್ತಾನ್ ಅಝ್ಲಾನ್ ಶಾ ಕಪ್ ಟೂರ್ನಿಯ ವೇಳೆ ಶ್ರೀಜೇಶ್‌ಗೆ ಬಲ ಮಂಡಿ ನೋವು ಕಾಣಿಸಿಕೊಂಡಿತ್ತು.

ಶ್ರೀಜೇಶ್ ಸಂಪೂರ್ಣ ಫಿಟ್‌ನೆಸ್ ಪಡೆದು ಸಕ್ರಿಯ ಹಾಕಿಗೆ ಮರಳಬೇಕಾದರೆ ಕನಿಷ್ಠ ಐದು ತಿಂಗಳು ಬೇಕಾಗುತ್ತದೆ. ಡಿಸೆಂಬರ್‌ನಲ್ಲಿ ಭುವನೇಶ್ವರದಲ್ಲಿ ನಡೆಯಲಿರುವ ಹಾಕಿ ವಿಶ್ವ ಲೀಗ್ ಫೈನಲ್‌ನಲ್ಲಿ ಆಡುವ ಉಜ್ವಲ ಅವಕಾಶವಿದೆ ಎಂದು ಹಾಕಿ ಇಂಡಿಯಾದ ಉನ್ನತ ಪ್ರದರ್ಶನದ ನಿರ್ದೇಶಕ ಡೇವಿಡ್ ಜಾನ್ ತಿಳಿಸಿದ್ದಾರೆ.

ನಾವು ಶ್ರೀಜೇಶ್ ಸೇವೆಯಿಂದ ವಂಚಿತರಾಗುತ್ತಿದೇವೆ. ವಿಕಾಸ್ ದಾಹಿಯಾ ಹಾಗೂ ಆಕಾಶ್ ಚಿಕ್ಟೆ ಯುವ ಗೋಲ್‌ಕೀಪರ್‌ಗಳಾಗಿದ್ದು, ವಿಶ್ವದ ಅಗ್ರ ಗೋಲ್‌ಕೀಪರ್‌ಗೆ ಸಮನಾದ ಪ್ರದರ್ಶನ ನೀಡಲು ಶಕ್ತರಾಗಿಲ್ಲ. ಮುಂದಿನ ಆರು ತಿಂಗಳಲ್ಲಿ ನಮ್ಮ ಕಿರಿಯ ಗೋಲ್‌ಕೀಪರ್‌ಗಳನ್ನು ಇನ್ನಷ್ಟು ಪಳಗಿಸಬೇಕಾಗಿದೆ. ಮುಂಬೈನಲ್ಲಿ ಡಾ.ಅನಂತ್ ಜೋಶಿ ಬಳಿ ಸರ್ಜರಿಗೆ ಒಳಗಾಗಿರುವ ಶ್ರೀಜೇಶ್ ಪೂರ್ಣ ಫಿಟ್‌ನೆಸ್ ಪಡೆಯಲು 5 ರಿಂದ ಆರು ತಿಂಗಳ ಅಗತ್ಯವಿದೆ ಎಂದು ಜಾನ್ ಹೇಳಿದ್ದಾರೆ.

ಕನ್ನಡಿಗ ವಿಆರ್ ರಘುನಾಥ್ ಅಂತಾರಾಷ್ಟ್ರೀಯ ಜೀವನ ಅಂತ್ಯವಾಗಿದೆ ಎಂದು ಸುಳಿವು ನೀಡಿದ ಜಾನ್, ಡಿಫೆಂಡರ್ ಆಗಿ ರಘು ಅವರ ವೇಗ ತುಂಬಾ ಕಡಿಮೆಯಿದೆ. ಡಿಫೆನ್ಸ್‌ನಲ್ಲಿ ವೇಗದ ಕೊರತೆ ನಮ್ಮ ದೊಡ್ಡ ಸಮಸ್ಯೆ. ಕಳೆದ ಸಂಭಾವ್ಯ ಪಟ್ಟಿಯಲ್ಲಿ ರಘು ಅವರನ್ನು ನಾವು ಹೊರಗಿಟ್ಟಿದ್ದೇವೆ. ಸೀರಿಯರ್ ನ್ಯಾಶನಲ್ಸ್ ನಂತರ ಹೊಸ ಪಟ್ಟಿ ಸಿದ್ಧವಾಗಲಿದೆ. ಈಗಿರುವ ರೂಪಿಂದರ್ ಪಾಲ್ ಸಿಂಗ್ ಹಾಗೂ ಹರ್ಮನ್‌ಪ್ರೀತ್ ಸಿಂಗ್ ಉತ್ತಮ ಡಿಫೆಂಡರ್‌ಗಳಾಗಿದ್ದಾರೆ ಎಂದು ಜಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News