×
Ad

ವಿಮಾನದಲ್ಲೇ ಹೆರಿಗೆ: ಮಗುವಿಗೆ ಏರ್ ಲೈನ್ಸ್ ನಿಂದ ಬಂಪರ್ ಕೊಡುಗೆಗಳು

Update: 2017-06-28 16:18 IST

ವಾಷಿಂಗ್ಟನ್, ಜೂ. 28: ಫೋರ್ಟ್ ಲಾಡರ್‌ಡೇಲ್ ನಿಂದ ಡಲ್ಲಾಸ್, ಟೆಕ್ಸಾಸ್ ಗೆ ಸಾಗುತ್ತಿದ್ದ ಸ್ಪಿರಿಟ್ ಏರ್ ಲೈನ್ಸ್ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಮಾನ ಹಾರಾಟ ಆರಂಭಿಸಿ 10ರಿಂದ 15 ನಿಮಿಷಗಳಾಗುವಷ್ಟರಲ್ಲಿಯೇ 36 ವಾರಗಳ ಗರ್ಭವತಿಯಾಗಿದ್ದ ಕ್ರಿಸ್ಟಿನಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ವಿಮಾನ ಪರಿಚಾರಿಕೆಯರಿಗೆ ಮಾಹಿತಿ ನೀಡಲಾಗಿ ವಿಮಾನವನ್ನು ನ್ಯೂ ಆರ್ಲಿಯನ್ಸ್ ನತ್ತ ಸಾಗಿಸಲಾಯಿತು. ಅಲ್ಲಿ ಅದು ತುರ್ತು ಭೂಸ್ಪರ್ಶ ಮಾಡಬೇಕೆನ್ನುವಷ್ಟರಲ್ಲಿಯೇ ಕ್ರಿಸ್ಟಿನಾ ಅವರು ಮಗುವಿಗೆ ಜನ್ಮ ನೀಡಿಯೇ ಬಿಟ್ಟಿದ್ದರು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳ ತಜ್ಞರೊಬ್ಬರು ಹಾಗೂ ನರ್ಸ್ ಒಬ್ಬರು ಆಕೆಯ ಸಹಾಯಕ್ಕೆ ನಿಂತರು.

ವಿಮಾನದ ಸಹಪ್ರಯಾಣಿಕೆಯೊಬ್ಬಳು ಘಟನಾವಳಿಯನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಸಣ್ಣ ವೀಡಿಯೋವೊಂದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕ್ರಿಸ್ಟಿನಾ ವಿಮಾನದಲ್ಲಿ ತನ್ನ ಇತರ ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ತಮ್ಮ ವಿಮಾನದಲ್ಲಿ ಹುಟ್ಟಿದ ಮುದ್ದು ಮಗುವಿಗೆ ಸ್ಪಿರಿಟ್ ಏರ್ ಲೈನ್ಸ್ ಬಹುಮಾನಗಳ ಸುರಿಮಳೆಯನ್ನೇ ಹರಿಸಿದೆ. ಆತ ಹುಟ್ಟಿದ ತಿಂಗಳಾದ ಜೂನ್ ನಲ್ಲಿ ಜೀವನಪರ್ಯಂತ ಉಚಿತ ಪ್ರಯಾಣ ಸೌಕರ್ಯದ ಆಫರ್ ಕೂಡ ಏರ್ ಲೈನ್ಸ್ ಮಾಡಿದೆ. ನಿಜವಾಗಿಯೂ ಆತ ಅದೃಷ್ಟವಂತ ಮಗುವೇ ಸರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News