ಭಾರತಕ್ಕೆ ‘ಗ್ಲೋಬಲ್ ಎಂಟ್ರಿ ಪ್ರೋಗ್ರಾಂ’ ಸದಸ್ಯತ್ವ: ಅಮೆರಿಕದ ಘೋಷಣೆ
ವಾಷಿಂಗ್ಟನ್, ಜೂ.28: ಅಮೆರಿಕದ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ವಿದೇಶಿ ಪ್ರಯಾಣಿಕರಿಗೆ ಎದುರಾಗುವ ದೊಡ್ಡ ಕಿರಿಕಿರಿಯೆಂದರೆ ಅಲ್ಲಿಯ ಸುದೀರ್ಘ ತಪಾಸಣಾ ಪ್ರಕ್ರಿಯೆ. ಸರತಿ ಸಾಲಿನಲ್ಲಿ ತಾಸುಗಟ್ಟಲೆ ನಿಂತು ತಪಾಸಣೆ ಪ್ರಕ್ರಿಯೆ ಮುಗಿಸಿ‘ಕ್ಲಿಯರೆನ್ಸ್’ ಪಡೆಯುವುದು ಒಂದು ಹರಸಾಹಸವೇ ಸರಿ. ಆದರೆ ಈ ಕಿರಿಕಿರಿಯ ಹಂಗಿಲ್ಲದೆ, ವಿಮಾನ ನಿಲ್ದಾಣದಲ್ಲಿ ಬಂದಿಳಿದೊಡನೆ ಅಲ್ಲಿ ತ್ವರಿತಗತಿಯಲ್ಲಿ ತಪಾಸಣೆ ಪ್ರಕ್ರಿಯೆ ಪೂರೈಸಿ ಹೊರಬರುವ ಒಂದು ವಿಶೇಷ ವ್ಯವಸ್ಥೆ ಅಮೆರಿಕದಲ್ಲಿದೆ.
ಜಾಗತಿಕ ಪ್ರವೇಶ ಯೋಜನೆ(ಗ್ಲೋಬಲ್ ಎಂಟ್ರಿ ಪ್ರೋಗ್ರಾಂ) ಎಂದು ಕರೆಸಿಕೊಳ್ಳುವ ಈ ವಿಶೇಷ ವ್ಯವಸ್ಥೆಯ ಭಾಗವಾಗಿ ಭಾರತವನ್ನೂ ಸೇರಿಸಿಕೊಂಡಿರುವುದಾಗಿ ಅಮೆರಿಕ ಘೋಷಿಸಿದೆ. ಬ್ರಿಟನ್ ಮತ್ತು ಸ್ವಿಝರ್‌ಲ್ಯಾಂಡ್ ರಾಷ್ಟ್ರಗಳ ಬಳಿಕ ಭಾರತಕ್ಕೆ ಈ ಗೌರವ ಲಭಿಸಿದೆ.
ಅಮೆರಿಕದ ಸೀಮಾ ಶುಲ್ಕ ಮತ್ತು ಗಡಿ ರಕ್ಷಣೆ(ಸಿಬಿಪಿ) ಕಾರ್ಯಕ್ರಮವಾಗಿರುವ ‘ಗ್ಲೋಬಲ್ ಎಂಟ್ರಿ ಪ್ರೋಗ್ರಾಂ’ನಡಿ ಮೊದಲೇ ಅನುಮೋದಿಸಲ್ಪಟ್ಟ , ಹೆಚ್ಚಿನ ತೊಂದರೆಗೆ ಕಾರಣವಾಗದ ಪ್ರವಾಸಿಗರು ಅಮೆರಿಕದ ಕೆಲವು ಆಯ್ದ ವಿಮಾನ ನಿಲ್ದಾಣದಲ್ಲಿ ಬಂದಿಳಿದೊಡನೆ ಅಲ್ಲಿ ‘ಕ್ಲಿಯರೆನ್ಸ್’ ಮತ್ತಿತರ ಪ್ರಕ್ರಿಯೆಗಳು ತ್ವರಿತಗತಿಯಲ್ಲಿ ನಡೆಯುತ್ತದೆ.
ಇಂತಹ ಪ್ರವಾಸಿಗರು ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ‘ಜಾಗತಿಕ ಪ್ರವೇಶ ಬೂತ್’ಗೆ ತೆರಳಿ ಅಲ್ಲಿರುವ ವಲಸೆ ಅಧಿಕಾರಿಯನ್ನು ಭೇಟಿಯಾಗಬೇಕು. ಬಳಿಕ ತನ್ನಲ್ಲಿರುವ ಪಾಸ್‌ಪೋರ್ಟ್ ಅನ್ನು ಅಲ್ಲಿರುವ ಯಂತ್ರದ ಎದುರು ಹಿಡಿಯಬೇಕು. ಪಾಸ್‌ಪೋರ್ಟ್ ವಿವರವನ್ನು ಯಂತ್ರ ದಾಖಲಿಸಿಕೊಳ್ಳುತ್ತದೆ. ಬಳಿಕ ಅಲ್ಲಿರುವ ಸ್ಕಾನಿಂಗ್ ಯಂತ್ರದ ಎದುರು ಬೆರಳಚ್ಚು ದಾಖಲಿಸಿಕೊಳ್ಳಬೇಕು. ಆ ಬಳಿಕ ಪ್ರವಾಸಿಗರಿಗೆ ನಿರ್ವಹಣೆ ರಶೀದಿಯನ್ನು ನೀಡಲಾಗುವುದು ಮತ್ತು ತನ್ನ ಲಗ್ಗೇಜುಗಳನ್ನು ಪಡೆದು ಹೊರತೆರಳುವಂತೆ ಸೂಚನೆ ಬರುತ್ತದೆ.
ಈ ಸೌಲಭ್ಯ ಪಡೆಯಬಯಸುವ ಪ್ರವಾಸಿಗರು ಮೊದಲೇ ಅನುಮೋದನೆ ಪಡೆಯಬೇಕಾಗುತ್ತದೆ. ಅನುಮೋದನೆ ನೀಡುವ ಮೊದಲು ಪ್ರವಾಸಿಗರ ಹಿನ್ನೆಲೆಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತದೆ ಮತ್ತು ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ. ಪ್ರವಾಸಿಗರಿಗೆ ತ್ವರಿತವಾಗಿ ಅಮೆರಿಕ ಪ್ರವೇಶಿಸಲು ಅನುವು ಮಾಡಿಕೊಡುವು ಉದ್ದೇಶದಿಂದ ಈ ಸೌಲಭ್ಯ ಜಾರಿಗೊಳಿಸಲಾಗಿದೆ. ಆದರೆ ಅಗತ್ಯಬಿದ್ದರೆ, ಇಂತಹ ಪ್ರಯಾಣಿಕರನ್ನು ಮತ್ತಷ್ಟು ವಿಚಾರಣೆ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.
ನ್ಯೂಯಾರ್ಕ್, ನೆವಾರ್ಕ್, ವಾಷಿಂಗ್ಟನ್, ಆಸ್ಟಿನ್, ಡಲ್ಲಾಸ್, ಹೂಸ್ಟನ್, ಬೋಸ್ಟನ್, ಚಿಕಾಗೊ, ಸಾನ್‌ಫ್ರಾನ್ಸಿಸ್ಕೊ, ಲಾಸ್ ಏಂಜಲಿಸ್, ಸ್ಯಾನ್ ಜೋಸ್, ಲಾಸ್ ವೆಗಾಸ್, ಮಿಯಾಮಿ ಮತ್ತು ಸೀಟಲ್- ಈ ವಿಮಾನ ನಿಲ್ದಾಣಗಳಲ್ಲಿ ‘ಗ್ಲೋಬಲ್ ಎಂಟ್ರಿ ಪ್ರೋಗ್ರಾಂ’ ವ್ಯವಸ್ಥೆಯಿದೆ. ಇದರ ಹೊರತಾಗಿ ಐರ್‌ಲ್ಯಾಂಡ್‌ನ ಡಬ್ಲಿನ್, ಕೆನಡದ ವಾಂಕೋವರ್ ಮತ್ತು ಟೊರಂಟೊ ಹಾಗೂ ಅಬುಧಾಬಿ ವಿಮಾನ ನಿಲ್ದಾಣಗಳು ಈ ಪಟ್ಟಿಯಲ್ಲಿವೆ. ಈ ವಿಮಾನ ನಿಲ್ದಾಣಗಳಲ್ಲೂ ಪ್ರವಾಸಿಗಳು ಅಮೆರಿಕ ವಲಸೆ ಪ್ರಕ್ರಿಯೆಗೆ ‘ಕ್ಲಿಯರೆನ್ಸ್’ ಪಡೆಯಬಹುದಾಗಿದೆ