ಸಿಕ್ಕಿಂ ವಿಭಾಗದಲ್ಲಿ ರಸ್ತೆ ನಿರ್ಮಾಣ ಸಮರ್ಥಿಸಿಕೊಂಡ ಚೀನಾ

Update: 2017-06-28 14:00 GMT

ಬೀಜಿಂಗ್,ಜೂ.28: ಸಿಕ್ಕಿಂ ವಿಭಾಗದಲ್ಲಿ ರಸ್ತೆ ನಿರ್ಮಾಣವು ‘ಕಾನೂನುಬದ್ಧ ’ವಾಗಿದೆ ಎಂದು ಬಣ್ಣಿಸಿದ ಚೀನಾ, ಭಾರತ ಅಥವಾ ಭೂತಾನಕ್ಕೆ ಸೇರಿರದ ಪ್ರದೇಶದಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಮತ್ತು ಇದರಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ದೇಶಕ್ಕೆ ಹಕ್ಕು ಇಲ್ಲ ಎಂದು ಒತ್ತಿ ಹೇಳಿದೆ.

ಭೂತಾನ್ ತನ್ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧ ಹೊಂದಿಲ್ಲವಾದರೂ ಅದರ ಪರವಾಗಿ ಮಾತನಾಡುತ್ತಿರುವ ಭಾರತವು ಸಿಕ್ಕಿಂ ವಿಭಾಗದಲ್ಲಿಯ, ಪ್ರಾಚೀನ ಕಾಲದಿಂದಲೂ ತನಗೆ ಸೇರಿರುವ ಡಂಗ್ಲಾಂಗ್ ಪ್ರದೇಶದಲ್ಲಿ ರಸ್ತೆ ನಿರ್ಮಾಣದ ತನ್ನ ಪ್ರಯತ್ನಗಳನ್ನು ಆಕ್ಷೇಪಿಸುತ್ತಿದೆ ಎಂದೂ ಚೀನಾ ಬೆಟ್ಟು ಮಾಡಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಅವರು, ಈ ಪ್ರದೇಶವನ್ನು ಮುಂದೆ ಮಾಡಿಕೊಂಡು ವಿವಾದವನ್ನೆತ್ತಲು ಭಾರತವು ಬಯಸುತ್ತಿದೆ. ಈ ಪ್ರದೇಶವು ಭೂತಾನ್ ಅಥವಾ ಭಾರತಕ್ಕೆ ಸೇರಿದ್ದಲ್ಲ. ಚೀನಾದಿಂದ ರಸ್ತೆ ನಿರ್ಮಾಣವು ಕಾನೂನುಬದ್ಧವಾಗಿದೆ ಮತ್ತು ಅದು ತನ್ನ ಭೂಪ್ರದೇಶದಲ್ಲಿ ನಡೆಸುತ್ತಿರುವ ಸಹಜ ಕ್ರಿಯೆಯಾಗಿದೆ. ಇತರ ಯಾವುದೇ ದೇಶವು ಹಸ್ತಕ್ಷೇಪ ಮಾಡುವ ಹಕ್ಕು ಹೊಂದಿಲ್ಲ ಎಂದರು.

ಭಾರತವನ್ನು ಟೀಕಿಸಿದ ಅವರು, ಭೂತಾನ್ ಜಾಗತಿಕ ಮಾನ್ಯತೆಯನು ಹೊಂದಿರುವ ಸಾರ್ವಭೌಮ ದೇಶವಾಗಿದೆ. ಇತರ ದೇಶಗಳು ಅದರ ಸಾರ್ವಭೌಮತೆಯನ್ನು ಗೌರವಿಸುತ್ತವೆ ಎಂದು ಆಶಿಸುತ್ತೇನೆ. ಚೀನಾ-ಭೂತಾನ್ ಗಡಿಯನ್ನು ರೇಖಿಸಲಾಗಿಲ್ಲ. ಈ ವಿಷಯದಲ್ಲಿ ಯಾವುದೇ ಮೂರನೇ ದೇಶ ಮಧ್ಯಪ್ರವೇಶಿಸುವಂತಿಲ್ಲ ಮತ್ತು ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡುವಂತಿಲ್ಲ ಎಂದರು.

 ಯಾವುದೇ ಮೂರನೇ ದೇಶವು ತನ್ನ ಗುಪ್ತ ಕಾರ್ಯಸೂಚಿಯೊಂದಿಗೆ ಮಧ್ಯಪ್ರವೇಶ ಮಾಡಿದರೆ ಅದು ಭೂತಾನದ ಸಾರ್ವಭೌಮತೆಗೆ ಅಗೌರವವಾಗುತ್ತದೆ ಮತ್ತು ಇದನ್ನು ನಾವು ಬಯಸುವುದಿಲ್ಲ ಎಂದು ಲು ಹೇಳಿದರು.

‘ಚಿಕನ್ಸ್ ನೆಕ್’ ಎಂದು ಕರೆಯಲಾಗುವ ಆಯಕಟ್ಟಿನ ಪ್ರದೇಶದ ಬಳಿಯಿರುವ ,ಭಾರತ,ಚೀನಾ ಮತ್ತು ಭೂತಾನ್ ಗಡಿಗಳು ಸೇರುವ ಸಿಕ್ಕಿಂ ಭಾಗದಲ್ಲಿ ಡಂಗ್ಲಾಂಗ್ ಇದೆ.
ಭಾರತ-ಚೀನಾ ಗಡಿಯ ಸಿಕ್ಕಿಂ ಭಾಗವು ಇತ್ಯರ್ಥಗೊಂಡಿದೆ, ಹೀಗಾಗಿ ರಸ್ತೆ ನಿರ್ಮಾಣವನ್ನು ಆಕ್ಷೇಪಿಸಲು ಭಾರತಕ್ಕೆ ಯಾವುದೇ ಹಕ್ಕು ಇಲ್ಲ ಎಂದು ಚೀನಾ ಪ್ರತಿಪಾದಿಸುತ್ತಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News