ಮುಂದಿನ ಕ್ಷುದ್ರಗ್ರಹ ಢಿಕ್ಕಿಯಿಂದ ಮಾನವ ಕುಲವೇ ಸರ್ವನಾಶ
ಪ್ಯಾರಿಸ್, ಜೂ. 28: ಭೂಮಿಯ ಸುಮಾರು 450 ಕೋಟಿ ವರ್ಷಗಳ ಇತಿಹಾಸದಲ್ಲಿ ಬಾಹ್ಯಾಕಾಶ ಬಂಡೆಗಳು (ಕ್ಷುದ್ರ ಗ್ರಹಗಳು) ಅದಕ್ಕೆ ಅಪ್ಪಳಿಸುತ್ತಲೇ ಬಂದಿವೆ. ಈ ಢಿಕ್ಕಿಯ ತೀವ್ರತೆಯು ಏರಿಳಿತಗಳಿಂದ ಕೂಡಿದೆ. ಕೆಲವು ಬಂಡೆಗಳು ಸಮುದ್ರದ ನೀರಿಗೆ ಸಣ್ಣ ಕಲ್ಲು ಬಿದ್ದಂತೆ ಅಪ್ಪಳಿಸಿದರೆ, ಇನ್ನು ಹಲವು ಕ್ಷುದ್ರಗ್ರಹಗಳು ಜೀವಿಗಳ ಪ್ರಭೇಧಗಳನ್ನೇ ನಾಶಗೊಳಿಸಿವೆ.
ಹಾಗಾದರೆ, ಇನ್ನು ಯಾವಾಗ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುತ್ತವೆ? ಯಾರಿಗೂ ಗೊತ್ತಿಲ್ಲ.
ಆದರೆ, ಅದನ್ನು ಮುಂಚಿತವಾಗಿ ನಿರ್ಧರಿಸುವ ಹಾಗೂ ಅದರ ಬರುವಿಕೆಯನ್ನು ತಡೆಗಟ್ಟುವುದಕ್ಕೆ ಈಗ ಒತ್ತು ನೀಡಲಾಗಿದೆ.
‘‘ಯಾವಾಗ ಬೇಕಾದರೂ ಲಘು ಅಥವಾ ಬೃಹತ್ ಕ್ಷುದ್ರಗ್ರಹಗಳು ಭೂಮಿಗೆ ಢಿಕ್ಕಿಯಾಗಬಹುದು’’ ಎಂದು ಜರ್ಮನಿಯ ಡಾರ್ಮ್ಸ್‌ಟಾಡ್‌ನಲ್ಲಿರುವ ಯುರೋಪಿಯನ್ ಬಾಹ್ಯಾಕಾಶ ಕಾರ್ಯಾಚರಣೆಗಳ ಕೇಂದ್ರ (ಇಎಸ್‌ಒಸಿ)ದ ಮುಖ್ಯಸ್ಥ ರಾಲ್ಫ್ ಡೆನ್ಸಿಂಗ್ ಹೇಳುತ್ತಾರೆ.
ಶುಕ್ರವಾರ ನಡೆಯಲಿರುವ ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನಕ್ಕೆ ಪೂರ್ವಭಾವಿಯಾಗಿ ಅವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಮಾತುಗಳನ್ನು ಹೇಳಿದರು.
‘‘ಇದು ನಮ್ಮ ಜೀವಮಾನದಲ್ಲಿ ಸಂಭವಿಸದಿರಬಹುದು. ಆದರೆ, ಒಂದು ದಿನ ಕ್ಷುದ್ರಗ್ರಹವೊಂದು ಅಪ್ಪಳಿಸಿ ಭೂಮಿ ನಶಿಸುವ ಅಪಾಯ ಇದ್ದೇ ಇದೆ’’ ಎಂದರು.
ಅತ್ಯಂತ ದೊಡ್ಡ ಕ್ಷುದ್ರಗ್ರಹಗಳು ಪ್ರತಿ 10 ಕೋಟಿ ವರ್ಷಗಳಿಗೊಮ್ಮೆ ಭೂಮಿಗೆ ಅಪ್ಪಳಿಸುತ್ತವೆ. ಮುಂದಿನ ಢಿಕ್ಕಿಯು ಮಾನವ ಕುಲವನ್ನೇ ಕೊನೆಗೊಳಿಸಬಹುದು ಎಂಬ ಭೀತಿಯನ್ನು ಅವರು ವ್ಯಕ್ತಪಡಿಸುತ್ತಾರೆ.