ಜು. 2: ಲೈಟ್ ಹೌಸ್ ರಸ್ತೆಗೆ ಮುಲ್ಕಿ ಸುಂದರ ರಾಮ ಶೆಟ್ಟಿ ನಾಮಕರಣ

Update: 2017-06-29 07:40 GMT

ಮಂಗಳೂರು, ಜೂ. 29: ನಗರದ ಲೈಟ್‌ಹೌಸ್ ರಸ್ತೆಗೆ ಸುಂದರ ರಾಮ ಶೆಟ್ಟಿ ನಾಮಕರಣ ಜುಲೈ 2ರಂದು ವಿಜಯ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಎದುರು ನಡೆಯಲಿದೆ ಎಂದು ವಿಜಯ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಸಂಘಟನೆಯ ಮಾಜಿ ಅಧ್ಯಕ್ಷ ಮುಲ್ಕಿ ಕರುಣಾಕರ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟನೆ ನೆರವೇರಿಸಲಿದ್ದು, ಮೇಯರ್ ಕವಿತಾ ಸನಿಲ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸಾರ್ವಜನಿಕ ರಸ್ತೆಗೆ ಸಾಧಕರ ನಾಮಕರಣದ ಸಂದರ್ಭ ಸರಕಾರದ ಕಾನೂನು ನಿಯಮಗಳಿಗೆ ಅನುಸಾರವಾಗಿ ಸಂಘಟನೆ ಹಲವಾರು ವರ್ಷಗಳಿಂದ ಸರಕಾರಿ ಕಚೇರಿಗಳಿಗೆ ಅಲೆದಾಡಿ ಸರಕಾರದಿಂದ ಆದೇಶವನ್ನು ಪಡೆದುಕೊಂಡು ಈ ನಾಮಕರಣಕ್ಕೆ ಮುಂದಾಗಿದೆ ಎಂದು ಅವರು ಹೇಳಿದರು.

ಈ ರಸ್ತೆಗೆ ಸಂತ ಅಲೋಶಿಯಸ್ ರಸ್ತೆ ಎಂಬುದಾಗಿ ಈ ಹಿಂದೆಯೇ ನಾಮಫಲಕ ಹಾಕಲಾಗಿದ್ದು, ಅದನ್ನು ಹಾಗೆಯೇ ಮುಂದುವರಿಸಬೇಕೆಂದು ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಒತ್ತಾಯ ಮಾಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ, ಈ ರಸ್ತೆಗೆ ಮುಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ ನಾಮಕರಣಕ್ಕಾಗಿ ಸರಕಾರದಿಂದ ಅಧಿಕೃತ ಆದೇಶವನ್ನು ಪಡೆಯಲಾಗಿದೆ ಎಂದು ಅವರು ಹೇಳಿದರು.

2015ರ ಸೆಪ್ಟಂಬರ್ 30ರಂದು ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಮಂಡಿಸಿ ಒಪ್ಪಿಗೆ ಪಡೆಯಲಾಗಿದೆ. ಬಳಿಕ ಸಾರ್ವಜನಿಕರಿಂದ ಆಕ್ಷೇಪಣೆ ಕೋರಿ ಪ್ರಕಟನೆ ನೀಡಲಾಗಿತ್ತು. 2016ರ ಫೆಬ್ರವರಿ 24ರಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮತ್ತೆ ಠರಾವು ಮಂಡನೆಗೊಂಡು ಅಂಬೇಡ್ಕರ್ ವೃತ್ತದಿಂದ ಲೈಟ್‌ಹೌಸ್ ಮಾರ್ಗದ ಕ್ಯಾಥಲಿಕ್ ಕ್ಲಬ್‌ವರೆಗಿನ ರಸ್ತೆಗೆ ಈ ನಾಮಕರಣಕ್ಕೆ ಸರಕಾರದಿಂದ ಅನುಮೋದನೆಗೆ ತೀರ್ಮಾನಿಸಲಾಯಿತು. ಅದರಂತೆ 2017ರ ಮೇ 24ರಂದು ನಾಮಕರಣಕ್ಕೆ ಸರಕಾರದಿಂದ ಆದೇಶ ದೊರಕಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ವಿಜಯ ಬ್ಯಾಂಕ್ ನೌಕರರ ಸಂಘಟನೆಯ ಮಂಗಳೂರು ವಲಯ ಅಧ್ಯಕ್ಷ ಶ್ರೀಧರ್ ಶೆಟ್ಟಿ ಎಂ., ವಲಯ ಕಾರ್ಯದರ್ಶಿ ರಘುರಾಮ ಸುವರ್ಣ, ಕೋಶಾಧಿಕಾರಿ ಭಾಸ್ಕರ್ ಮಲ್ಲಿ, ಮಾಜಿ ಅಧ್ಯಕ, ಸೀತಾಚರಣ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News