ವಿಹಿಂಪ ನಾಯಕನಿಗೆ ಶವಗಳನ್ನು ಒಪ್ಪಿಸುವಂತೆ ಹಿರಿಯ ಅಧಿಕಾರಿಗಳೇ ಸೂಚಿಸಿದ್ದರು: ಗೋಧ್ರಾದ ಮಾಜಿ ತಹಶೀಲ್ದಾರ

Update: 2017-06-29 11:06 GMT

ಅಹ್ಮದಾಬಾದ್,ಜೂ.2: ಗೋಧ್ರಾ ರೈಲುದಹನ ಘಟನೆಯಲ್ಲಿ ಮೃತಪಟ್ಟಿದ್ದ ಕರಸೇವಕರ ಶವಗಳನ್ನು ವಿಶ್ವ ಹಿಂದು ಪರಿಷತ್(ವಿಹಿಂಪ)ನ ನಾಯಕ ಜೈದೀಪ್ ಪಟೇಲ್‌ಗೆ ಒಪ್ಪಿಸುವಂತೆ ತನ್ನ ಹಿರಿಯ ಅಧಿಕಾರಿಗಳು ತನಗೆ ಸೂಚಿಸಿದ್ದರು ಮತ್ತು ಅದಕ್ಕಾಗಿ ತಾನು ಪತ್ರವೊಂದನ್ನು ಸಿದ್ಧಗೊಳಿಸಿದ್ದೆ ಎಂದು ಆಗ ಗೋಧ್ರಾದ ತಹಶೀಲ್ದಾರ್ ಆಗಿದ್ದ ಎಂ.ಎಲ್.ನಲ್ವಯಾ ಅವರು ಬುಧವಾರ 2002ರ ನರೋದಾ ಗಾಮ್ ದಂಗೆ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ನಿಯೋಜಿತ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪಟೇಲ್ ನರೋದಾ ಗಾಮ್ ದಂಗೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಸದ್ಯ ಜಾಮೀನಿನಲ್ಲಿ ಹೊರಗಿದ್ದಾನೆ.

 ಗೋಧ್ರಾ ರೈಲು ನಿಲ್ದಾಣದಲ್ಲಿ ನಿಂತಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗೆ ಬೆಂಕಿ ಹಚ್ಚಿದ ಪರಿಣಾಮ ಅದರಲ್ಲಿದ್ದ ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರು ಸಜೀವ ದಹನಗೊಂಡಿದ್ದರು. ಇದು ಗುಜರಾತ್‌ನಾದ್ಯಂತ ಕೋಮುದಂಗೆಗೆ ಕಾರಣ ವಾಗಿತ್ತು.

ನರೋದಾ ಗಾಮ್ ನರಮೇಧದಲ್ಲಿ 11 ಮುಸ್ಲಿಮರು ಕೊಲ್ಲಲ್ಪಟ್ಟಿದ್ದರು. ಮಾಜಿ ಸಚಿವೆ ಮಾಯಾ ಕೊಡ್ನಾನಿ ಸೇರಿದಂತೆ 82 ಜನರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

 ಬುಧವಾರ ನ್ಯಾಯಾಲಯದಲ್ಲಿ ಹಾಜರಾಗಿದ್ದ, ಹಾಲಿ ದಾಹೋದ್‌ನಲ್ಲಿ ಉಪ ವಿಭಾಗಾಧಿಕಾರಿಯಾಗಿರುವ ನಲ್ವಯಾ, ಗೋಧ್ರಾ ರೈಲು ನಿಲ್ದಾಣದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಹಚ್ಚಲಾಗಿದ್ದ ಸ್ಥಳಕ್ಕೆ ತಾನು ತೆರಳಿದ್ದೆ ಮತ್ತು ತನ್ನ ಮೇಲಧಿಕಾರಿಗಳ ಉಸ್ತುವಾರಿಯಲ್ಲಿ ಶವಗಳನ್ನು ಪರಿಶೀಲಿಸಿದ್ದೆ ಮತ್ತು ಇತರ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ್ದೆ ಎಂದು ತಿಳಿಸಿದರು.

ಅಹ್ಮದಾಬಾದ್‌ನ ಸೋಲಾ ಸರಕಾರಿ ಆಸ್ಪತ್ರೆಯಲ್ಲಿ ಕರಸೇವಕರ ಶವಗಳನ್ನು ಜೈದೀಪ್ ಪಟೇಲ್‌ಗೆ ಹಸ್ತಾಂತರಿಸಬೇಕು ಎಂದು ಸೂಚಿಸಿ ತಾನು ಪತ್ರವೊಂದನ್ನು ಬರೆದಿದ್ದೆ ಎಂದೂ ಅವರು ತಿಳಿಸಿದರು.

 ಪ್ರಕರಣದ ತನಿಖೆಯನ್ನು ನಡೆಸಿದ್ದ ವಿಶೇಷ ತನಿಖಾ ತಂಡ(ಸಿಟ್)ದ ಪರ ವಕೀಲರ ಪಾಟೀಸವಾಲಿಗೆ ಉತ್ತರಿಸಿದ ನಲ್ವಯಾ, ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ತಾನು ಆ ಪತ್ರವನ್ನು ಬರೆದಿದ್ದಾಗಿ ತಿಳಿಸಿದರು. ಪತ್ರಕ್ಕೆ ಪಟೇಲ್ ಸಹಿ ಮಾಡಿರಲಿಲ್ಲ ಮತ್ತು ಅದನ್ನು ಬೇರೆ ಯಾರಿಗೋ ನೀಡಲಾಗಿತ್ತು. ತನಗೆ ಪಟೇಲ್‌ನ ಪರಿಚಯವಿರಲಿಲ್ಲ ಮತ್ತು ತಾನೆಂದು ಆತನನ್ನು ಭೇಟಿಯಾಗಿರಲಿಲ್ಲ ಎಂದೂ ಅವರು ಹೇಳಿದರು.

 ಶವಗಳನ್ನು ಪಡೆದುಕೊಂಡ ಬಗ್ಗೆ ಪತ್ರದಲ್ಲಿ ಯಾವುದೇ ಸಹಿ ಇಲ್ಲ ಎಂಂದು ಸಿಟ್ ಹೇಳಿದೆ.

ಶವಗಳನ್ನು ಗೋಧ್ರಾದಿಂದ ಅಹ್ಮದಾಬಾದ್‌ಗೆ ತರಲಾಗಿತ್ತು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು.

ಆರೋಪಿಗಳ ಪರವಾಗಿ ಹೆಚ್ಚುವರಿ ಸಾಕ್ಷಗಳ ಭಾಗವಾಗಿ ನಲ್ವಯಾರ ಹೇಳಿಕೆಯನ್ನು ನ್ಯಾಯಾಲಯವು ದಾಖಲಿಸಿಕೊಂಡಿದೆ. ಹೆಚ್ಚುವರಿ ಪ್ರತಿವಾದಿ ಪರ ಸಾಕ್ಷಿಗಳ ಹೇಳಿಕೆ ಗಳನ್ನು ದಾಖಲಿಸಿಕೊಳ್ಳುವಂತೆ ಕೋರಿ ಆರೋಪಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದಕ್ಕೆ ನ್ಯಾಯಾಲಯವು ಅಸ್ತು ಎಂದಿದೆ. ಇಂತಹ ಸುಮಾರು 30 ಸಾಕ್ಷಿಗಳನ್ನು ಪಾಟೀಸವಾಲಿಗೆ ಒಳಪಡಿಸಲಾಗಿದೆ ಎಂದು ಸಿಟ್ ಮೂಲಗಳು ತಿಳಿಸಿವೆ.

  ಹಿಂದುಗಳ ಆಸ್ತಿಗಳಿಗೆ ಉಂಟಾದ ನಷ್ಟದ ಬಗ್ಗೆ ಅಹ್ಮದಾಬಾದ್ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ಮಹೇಂದ್ರ ಸೋನಿಯವರನ್ನೂ ಬುಧವಾರ ಪ್ರತಿವಾದಿ ಪರ ವಕೀಲರು ಪಾಟೀಸವಾಲಿಗೆ ಒಳಪಡಿಸಲಿದ್ದರು. ಸೋನಿ ಅವರು ಹಿಂದು ಮತ್ತು ಮುಸ್ಲಿಮರ ಆಸ್ತಿಗಳಿಗೆ ಆಗಿದ್ದ ಒಟ್ಟು ಹಾನಿಯ ಕುರಿತು ಮಾಹಿತಿಗಳನ್ನು ತನ್ನೊಂದಿಗೆ ತಂದಿದ್ದರು. ಆದರೆ ಪ್ರತಿವಾದಿ ಪರ ವಕೀಲರು ಹಿಂದುಗಳ ಆಸ್ತಿಗಳಿಗೆ ಉಂಟಾಗಿದ್ದ ಹಾನಿ ಮತ್ತು ಪಾವತಿಸಲಾದ ಪರಿಹಾರದ ಕುರಿತು ಪ್ರತ್ಯೇಕ ಮಾಹಿತಿಗಳಿಗಾಗಿ ಆಗ್ರಹಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಜು.3ರಂದು ಪ್ರತ್ಯೇಕ ಮಾಹಿತಿಗಳನ್ನು ಸಲ್ಲಿಸುವಂತೆ ಅವರಿಗೆ ನಿರ್ದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News