ಎಚ್-1ಬಿ ವೀಸಾದಾರರ ವೇತನವನ್ನು 80,000 ಡಾ.ಗೆ ಹೆಚ್ಚಿಸಿ
ವಾಶಿಂಗ್ಟನ್, ಜೂ. 29: ಎಚ್-1ಬಿ ವೀಸಾ ಹೊಂದಿರುವ ವಿದೇಶಿ ಕೆಲಸಗಾರರ ಕನಿಷ್ಠ ವೇತನವನ್ನು ಈಗಿನ 60,000 ಡಾಲರ್‌ನಿಂದ ಕನಿಷ್ಠ 80,000 ಡಾಲರ್‌ಗೆ ಏರಿಸುವಂತೆ ಅಮೆರಿಕದ ಕಾರ್ಮಿಕ ಕಾರ್ಯದರ್ಶಿ ಅಲೆಕ್ಸಾಂಡರ್ ಅಕೋಸ್ಟ ಶಿಫಾರಸು ಮಾಡಿದ್ದಾರೆ.
ಎಚ್-1ಬಿ ವೀಸಾಗಳನ್ನು ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಹೆಚ್ಚಾಗಿ ಬಳಸುತ್ತಿವೆ.
ಇದು ಎಚ್-1ಬಿ ವೀಸಾದಲ್ಲಿ ಅಮೆರಿಕಕ್ಕೆ ಬರುವ ವಿದೇಶಿ ಕೆಲಸಗಾರರು ಅಮೆರಿಕನ್ನರ ಕೆಲಸಗಳನ್ನು ಆಕ್ರಮಿಸುವ ಸಮಸ್ಯೆಯನ್ನು ಬಹುಮಟ್ಟಿಗೆ ಪರಿಹರಿಸುತ್ತದೆ ಎಂದು ಕಾಂಗ್ರೆಸ್ ಸಂಸದೀಯ ಸಮಿತಿಯೊಂದರ ಮುಂದೆ ವಿವರಣೆ ನೀಡಿದ ಅವರು ಹೇಳಿದರು.
‘‘60,000 ಡಾಲರ್ ಕನಿಷ್ಠ ವೇತನವನ್ನು ಹಲವಾರು ಸಮಯದಿಂದ ಕಾಂಗ್ರೆಸ್ ಪರಿಷ್ಕರಿಸಿಲ್ಲ. ಕೇವಲ ಹಣದುಬ್ಬರದ ಕಾರಣಕ್ಕಾಗಿಯಾದರೂ ಕಾಂಗ್ರೆಸ್ ಅದನ್ನು ಪರಿಷ್ಕರಿಸಿದರೆ ಕನಿಷ್ಠ ವೇತನ 80,000 ಡಾಲರ್‌ಗೂ ಅಧಿಕವಾಗುತ್ತದೆ. ಆಗ ನೀವು ಪಟ್ಟಿ ಮಾಡಿರುವ ಸಮಸ್ಯೆಗಳ ಪೈಕಿ ಹೆಚ್ಚಿನವು ಪರಿಹಾರವಾಗುತ್ತದೆ’’ ಎಂದು ಅವರು ನುಡಿದರು.
ಕಾರ್ಮಿಕ, ಆರೋಗ್ಯ ಮತ್ತು ಮಾನವೀಯ ಸೇವೆಗಳು, ಶಿಕ್ಷಣ ಮತ್ತು ಸಂಬಂಧಿತ ಸಂಸ್ಥೆಗಳ ಮೇಲಿನ ಸೆನೆಟ್ ಉಪ ಸಮಿತಿಗೆ ಅವರು ಈ ವಿವರಣೆಗಳನ್ನು ನೀಡಿದರು.