1962ರ ಸೋಲಿನಿಂದ ಪಾಠ ಕಲಿಯಿರಿ: ಭಾರತಕ್ಕೆ ಚೀನಾ ಸೇನೆ ಎಚ್ಚರಿಕೆ

Update: 2017-06-29 15:21 GMT

ಬೀಜಿಂಗ್, ಜೂ. 28: 1962ರಲ್ಲಿ ಅನುಭವಿಸಿದ ಸೋಲಿನಿಂದ ಭಾರತ ಪಾಠ ಕಲಿಯಬೇಕು ಹಾಗೂ ಯುದ್ಧಕ್ಕಾಗಿ ಕಾತರಿಸುವುದನ್ನು ನಿಲ್ಲಿಸಬೇಕು ಎಂದು ಚೀನಾ ಗುರುವಾರ ಎಚ್ಚರಿಸಿದೆ.

ಸಿಕ್ಕಿಂ ವಲಯದಲ್ಲಿ ಈಗ ಉಂಟಾಗಿರುವ ಬಿಕ್ಕಟ್ಟನ್ನು ಇತ್ಯರ್ಥಪಡಿಸುವ ಮಾತುಕತೆಯ ಪೂರ್ವ ಶರತ್ತಾಗಿ ಭಾರತ ತನ್ನ ಸೈನಿಕರನ್ನು ಅಲ್ಲಿಂದ ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದಿದೆ.

 ತನ್ನ ಸೈನಿಕರು ತನ್ನದೇ ನೆಲದಲ್ಲಿ ರಸ್ತೆ ನಿರ್ಮಿಸುತ್ತಿದ್ದಾರೆ, ಭೂತಾನ್‌ಗೆ ಸೇರಿದ ಜಮೀನಿನಲ್ಲಿ ಅಲ್ಲ ಎಂದು ಚೀನಾ ಹೇಳಿದೆ.

ಚೀನಾ, ಪಾಕಿಸ್ತಾನ ಮತ್ತು ಆಂತರಿಕ ಭದ್ರತಾ ವಿಷಯಗಳನ್ನು ಎದುರಿಸಲು ಭಾರತ ಸಿದ್ಧವಾಗಿದೆ ಎಂಬುದಾಗಿ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನೀಡಿರುವ ಹೇಳಿಕೆಗೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ವಕ್ತಾರ ವು ಕಿಯನ್ ಪ್ರತಿಕ್ರಿಯಿಸುತ್ತಿದ್ದರು.

‘‘ಇಂಥ ಹೇಳಿಕೆಗಳು ಅತ್ಯಂತ ಬೇಜವಾಬ್ದಾರಿಯುತ. ಭಾರತೀಯ ಸೇನೆಯಲ್ಲಿರುವ ಈ ನಿರ್ದಿಷ್ಟ ವ್ಯಕ್ತಿ ಇತಿಹಾಸದಿಂದ ಪಾಠ ಕಲಿಯುತ್ತಾರೆ ಹಾಗೂ ಯುದ್ಧಕ್ಕಾಗಿ ಹಪಹಪಿಸುವುದನ್ನು ನಿಲ್ಲಿಸುತ್ತಾರೆ ಎಂದು ನಾವು ಆಶಿಸುತ್ತೇವೆ’’ ಎಂದು ಬೀಜಿಂಗ್‌ನಲ್ಲಿ ನಡೆದ ರಕ್ಷಣಾ ಸಚಿವಾಲಯದ ತಿಂಗಳ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಭಾರತವನ್ನು ಗುರಿಯಾಗಿಸಿ ಟಿಬೆಟ್‌ನಲ್ಲಿ ಚೀನೀ ಟ್ಯಾಂಕ್ ನಿಯೋಜನೆ

ಭಾರತವನ್ನು ಗುರಿಯಾಗಿಸಿ ಟಿಬೆಟ್ ಸ್ವಾಯತ್ತ ಪ್ರದೇಶ (ಟಿಎಆರ್)ದಲ್ಲಿ ಚೀನಾ ನೂತನ 35 ಟನ್ ಸಾಮರ್ಥ್ಯದ ಯುದ್ಧ ಟ್ಯಾಂಕೊಂದನ್ನು ನಿಯೋಜಿಸಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

 ಟಿಬೆಟ್‌ನ ಬಯಲು ಸೀಮೆಯಲ್ಲಿ ಸೇನೆಯು ಈ ಟ್ಯಾಂಕ್‌ನಲ್ಲಿ ಇತ್ತೀಚೆಗೆ ತಾಲೀಮು ನಡೆಸಿದೆ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿಯ ವಕ್ತಾರ ವು ಕಿಯನ್ ಗುರುವಾರ ತಿಳಿಸಿದರು.

ಆದಾಗ್ಯೂ, ಯಾವುದೇ ದೇಶವನ್ನು ಗುರಿಯಾಗಿಸಿ ಟ್ಯಾಂಕನ್ನು ಇಲ್ಲಿ ನಿಯೋಜಿಸಲಾಗಿಲ್ಲ ಹಾಗೂ ತಾಲೀಮು ನಡೆಸಿಲ್ಲ ಎಂದು ಅವರು ಹೇಳಿಕೊಂಡರು.

ಆದಾಗ್ಯೂ, ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸುವ ಉದ್ದೇಶದಿಂದ ಚೀನಾವು ಟಿಬೆಟ್‌ನಲ್ಲಿ ತನ್ನ ಸೇನಾ ಉಪಸ್ಥಿತಿಯನ್ನು ಹೆಚ್ಚಿಸುತ್ತಿದೆ ಎಂಬುದಾಗಿ ‘ಗ್ವಾಂಚ’ ವೆಬ್‌ಸೈಟ್‌ನಲ್ಲಿ ಇತ್ತೀಚೆಗೆ ಪ್ರಕಟಗೊಂಡ ವರದಿಯೊಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News