ಮಧುಬನಿ: ಶಿವಲಿಂಗ ವಿವಾದ: ಓರ್ವನ ಹತ್ಯೆ, ಪರಿಸ್ಥಿತಿ ಉದ್ವಿಗ್ನ

Update: 2017-06-29 15:32 GMT

ಮಧುಬನಿ, ಜೂ. 29: ಉತ್ತರ ಬಿಹಾರದ ಮಧುಬನಿ ಜಿಲ್ಲೆಯ ಖೋಜ್‌ಪುರ್ ಗ್ರಾಮದಲ್ಲಿರುವ ವಿವಾದಾತ್ಮಕ ಶಿವಲಿಂಗವನ್ನು ಬುಧವಾರ ರಾತ್ರೀ ಸ್ವಾಧೀನಪಡಿಸಿ ಕೊಳ್ಳಲು ನಾಗರಿಕ ಹಾಗೂ ಪೊಲೀಸ್ ಅಧಿಕಾರಿಗಳು ಪ್ರಯತ್ನ ನಡೆಸಿದ ಸಂದರ್ಭ ನಡೆದ ಘರ್ಷಣೆ ಬಳಿಕ ಇಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಘಟನೆ ಪಾಟ್ನಾದಿಂದ 213 ಕಿ.ಮೀ. ದೂರದಲ್ಲಿರುವ ಜಿಲ್ಲೆಯ ಬಾಬುಬರ್ಹಿ ಪೊಲೀಸ್ ಠಾಣಾ ವ್ಯಾಪ್ತಿಯ ಖೋಜ್‌ಪುರ್ ಗ್ರಾಮದಲ್ಲಿ ನಡೆದಿದೆ. ಪೊಲೀಸರು ಲಾಠಿ ಚಾರ್ಜ್, ಗುಂಡು ಹಾರಿಸಿದ ಬಳಿಕ ಉಂಟಾದ ಘರ್ಷಣೆಯಲ್ಲಿ ಅಂಗಡಿ ಮಾಲಕನೋರ್ವ ಮೃತಪಟ್ಟ ಬಳಿಕ ಪರಿಸ್ಥಿತಿ ಉದ್ವಿಗ್ನವಾಯಿತು ಎಂದು ಗ್ರಾಮ ನಿವಾಸಿಗಳು ತಿಳಿಸಿದ್ದಾರೆ.

ಮಧುಬನಿ ಸಾದರ್‌ನ ಉಪ ವಿಭಾಗೀಯ ಅಧಿಕಾರಿಯ ವಾಹನ ಅಂಗಡಿ ಮಾಲಿಕ ಮಂಗನ್ ಸಾಹು ಅವರಿಗೆ ಢಿಕ್ಕಿ ಹೊಡೆಯಿತು ಹಾಗೂ ಅವರನ್ನು ಬಹು ದೂರದವರೆಗೆ ಎಳೆದೊಯ್ದಿತು. ಇದರಿಂದ ಅವರು ಮೃತಪಟ್ಟರು ಎಂದು ಗ್ರಾಮ ನಿವಾಸಿಗಳು ಹೇಳಿದ್ದಾರೆ. ಆದರೆ, ಈ ಸಾವಿನ ಹಿಂದಿನ ನಿಜವಾದ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ಬಹಿರಂಗವಾಗಲಿದೆ ಎಂದು ಬಾಬುಬರ್ಹಿ ಠಾಣೆಯ ಅಧಿಕಾರಿ ಪಂಕಜ್ ಆನಂದ್ ತಿಳಿಸಿದ್ದಾರೆ. ಪೊಲೀಸರು ಲಾಠಿಚಾರ್ಜ್ ಹಾಗೂ ಗುಂಡು ಹಾರಿಸಿದರು ಎಂಬುದನ್ನು ಕೂಡ ಪಂಕಜ್ ಆನಂದ್ ನಿರಾಕರಿಸಿದ್ದಾರೆ.

ಶಾಹು ಸಾವಿನ ಬಳಿಕ ಗ್ರಾಮ ನಿವಾಸಿಗಳು ಬ್ಲಾಕ್ ಅಭಿವೃದ್ಧಿ ಅಧಿಕಾರಿ ಹಾಗೂ ಪೊಲೀಸರ ವಾಹನ, ಜೆಸಿಬಿಗೆ ಬೆಂಕಿ ಹಚ್ಚಿದ್ದಾರೆ. ಗುರುವಾರ ಗ್ರಾಮ ನಿವಾಸಿಗಳು ಖುಟೌನಾ-ಬಾಬುಬರ್ಹಿ ರಸ್ತೆಯಲ್ಲಿ ಶಾಹುವಿನ ಶವ ಇರಿಸಿ ಸಂಚಾರಕ್ಕೆ ತಡೆ ಒಡ್ಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News