ನಾಳೆ ವಿಂಡೀಸ್ ವಿರುದ್ಧ ಮೂರನೆ ಏಕದಿನ ಪಂದ್ಯ
ಆ್ಯಂಟಿಗುವಾ, ಜೂ.29: ದುರ್ಬಲ ವೆಸ್ಟ್‌ಇಂಡೀಸ್ ವಿರುದ್ಧ 1-0 ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಶುಕ್ರವಾರ ಇಲ್ಲಿ ನಡೆಯಲಿರುವ ಮೂರನೆ ಏಕದಿನ ಅಂತರಾಷ್ಟ್ರೀಯ ಪಂದ್ಯದಲ್ಲಿ ಗೆಲುವಿನೊಂದಿಗೆ ಸರಣಿ ಗೆಲುವಿನ ಕಡೆಗೆ ನೋಡುತ್ತಿದೆ.
ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಮೊದಲ ಪಂದ್ಯ ಮಳೆಯಿಂದ ಕೊಚ್ಚಿ ಹೋಗಿತ್ತು. ಆದರೆ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಎರಡನೆ ಪಂದ್ಯದಲ್ಲಿ ಭಾರತ 105 ರನ್‌ಗಳ ಜಯ ದಾಖಲಿಸಿತ್ತು.
ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆರಂಭಿಕ ದಾಂಡಿಗ ರಹಾನೆ ಶತಕ , ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಅರ್ಧಶತಕ ದಾಖಲಿಸಿದ್ದರು.
ರಹಾನೆ 104 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 103 ರನ್ ಗಳಿಸಿದ್ದರು. ಮೂರನೆ ಶತಕ ದಾಖಲಿಸಿದ್ದ ರಹಾನೆ ಅವರು ಆರಂಭಿಕ ದಾಂಡಿಗ ಶಿಖರ್ ಧವನ್ ಜೊತೆ ಮೊದಲ ವಿಕೆಟ್‌ಗೆ 114 ರನ್‌ಗಳ ಜೊತೆಯಾಟ ನೀಡಿದ್ದರು.
ಧವನ್ 63ರನ್ ಮತ್ತು ವಿರಾಟ್ ಕೊಹ್ಲಿ 87 ರನ್ ಇವರ ಅರ್ಧಶತಕಗಳ ಸಹಾಯದಿಂದ ಭಾರತ ಮಳೆ ಬಾಧಿತ ಪಂದ್ಯದಲ್ಲಿ 43 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 310 ರನ್ ಗಳಿಸಿತ್ತು.
ಯುವರಾಜ್ ಸಿಂಗ್ (14) ಕಳಪೆ ಪ್ರದರ್ಶನ ನೀಡಿದ್ದರು. ಹಾರ್ದಿಕ್ ಪಾಂಡ್ಯ (4) ಬೇಗನೆ ಔಟಾಗಿದ್ದು, ಧೋನಿ ಮತ್ತು ಜಾಧವ್ ಔಟಾಗದೆ ತಲಾ 13 ರನ್‌ಗಳ ಕೊಡುಗೆ ನೀಡಿದ್ದರು.
ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್(50ಕ್ಕೆ 3), ಭುವನೇಶ್ವರ ಕುಮಾರ್(9ಕ್ಕೆ 2) ಮತ್ತು ಆರ್.ಅಶ್ವಿನ್(47ಕ್ಕೆ 1) ದಾಳಿಗೆ ಸಿಲುಕಿ ವಿಂಡೀಸ್ 43 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 205 ರನ್ ಗಳಿಸಿತ್ತು. ಭುವನೇಶ್ವರ ಕುಮಾರ್ ಕೇವಲ 5 ಓವರ್‌ಗಳಲ್ಲಿ 9 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದಿದ್ದರು.ಯಾದವ್ ಎರಡನೆ ಏಕದಿನ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದರು.
ವಿಂಡೀಸ್ ಪರ ವಿಕೆಟ್ ಕೀಪರ್ ಶಾಯಿ ಹೋಪ್ 81ರನ್(88ಎ, 5ಬೌ,3ಸಿ) ಸಿಡಿಸಿದ್ದರು. ಇವರನ್ನು ಹೊರತುಪಡಿಸಿದರೆ ನಾಯಕ ಹೋಲ್ಡರ್(29) ,ಲೆವಿಸ್(21), ಕಾರ್ಟರ್(13),ಚೇಸ್ ಔಟಾಗದೆ (33) ಮತ್ತು ನರ್ಸ್(ಔಟಾಗದೆ 19) ಎರಡಂಕೆಯ ಮೊತ್ತ ದಾಖಲಿಸಿದ್ದರು.
ವೆಸ್ಟ್‌ಇಂಡೀಸ್ ತಂಡ ಮುಂದಿನ ಮೂರು ಏಕದಿನ ಪಂದ್ಯಗಳಿಗೆ 13 ಮಂದಿ ಕೈಲ್ ಹೋಪ್ ಮತ್ತು ಸುನೀಲ್ ಅಂಬ್ರೀಸ್‌ಗೆ ಸ್ಥಾನ ನೀಡಿದೆ.
ಕೈಲ್ ಹೋಪ್ ವಿಂಡೀಸ್ ತಂಡದ ವಿಕೆಟ್ ಕೀಪರ್ ಶಾಯಿ ಹೋಪ್ ಸಹೋದರ.ಟ್ರಿನಿಡಾಡ್ ಮತ್ತು ಟೊಬಾಗೊ ತಂಡವನ್ನು ದೇಶಿಯ ಟೂರ್ನಿಗಳಲ್ಲಿ ಕೈಲ್ ಹೋಪ್‌ನಾಯಕರಾಗಿ ಮುನ್ನಡೆಸುತ್ತಿದ್ದಾರೆ. ಅಂಬ್ರೀಸ್ ವಿಂಡ್ವಾರ್ಡ್ ಐಲ್ಯಾಂಡ್ ತಂಡದ ವಿಕೆಟ್ ಕೀಪರ್ ಆಗಿದ್ದಾರೆ.
ಕೈಲ್ ವಿಂಡೀಸ್ ‘ಎ’ ತಂಡದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡು ಉತ್ತಮ ಪ್ರದರ್ಶನ ನೀಡಿದ್ದರು. ಪಿಸಿಎಲ್ ಟೂರ್ನಿಯಲ್ಲಿ ಟ್ರೀನಿಡಾಡ್ ಆ್ಯಂಡ್ ಟೊಬಾಗೊ ರೆಡ್ ಫೋರ್ಸ್ ಫ್ರಾಂಚೈಸಿ ತಂಡದಲ್ಲಿ ಮಿಂಚಿದ್ದರು. ಅಬ್ರೀಸ್ ವಿಂಡ್ವಾರ್ಡ್ ತಂಡದ ಪರ ಪಿಸಿಎಲ್ ಪ್ರಥಮ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಚೆನ್ನಾಗಿ ಆಡಿದ್ದರು.
ಭಾರತ : ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಯುವರಾಜ್ ಸಿಂಗ್, ಎಂಎಸ್ ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಉಮೇಶ್ ಯಾದವ್.
ವೆಸ್ಟ್‌ಇಂಡೀಸ್ ತಂಡ: ಜೇಸನ್ ಹೋಲ್ಡರ್(ನಾಯಕ), ಸುನೀಲ್ ಅಂಬ್ರೀಸ್, ದೇವೆಂದ್ರ ಬಿಶೂ, ರೋಸ್ಟನ್ ಚೇಸ್, ಮಿಗ್ಯುಲ್ ಕಮಿನ್ಸ್, ಕೈಲ್ ಹೋಪ್, ಶಾಯಿ ಹೋಪ್, ಅಲ್ಝಾರಿ ಜೋಸೆಫ್, ಎವಿನ್ ಲೆವಿಸ್, ಜೇಸನ್ ಮುಹಮ್ಮದ್ ,ಅಶ್ಲೇ ನರ್ಸ್, ಕೀರನ್ ಪೋವೆಲ್, ರೊವ್‌ಮ್ಯಾನ್ ಪೋವೆಲ್
ಪಂದ್ಯದ ಸಮಯ: ಸಂಜೆ 6:30ಕ್ಕೆ ಆರಂಭ