ಜಿಎಸ್‌ಟಿ ವಿರೋಧಿಸಿ ಕಾನ್ಪುರದಲ್ಲಿ ವ್ಯಾಪಾರಸ್ಥರಿಂದ ಪ್ರತಿಭಟನೆ, ರೈಲು ತಡೆ
ಕಾನ್ಪುರ, ಜೂ. 30: ಜಿಎಸ್‌ಟಿ ವಿರೋಧಿಸಿ ಉತ್ತರಪ್ರದೇಶದ ವ್ಯಾಪಾರ ಕೇಂದ್ರ ಕಾನ್ಪುರದಲ್ಲಿ ವ್ಯಾಪಾರಸ್ಥರು ರೈಲು ಹಳಿಯಲ್ಲಿ ಕುಳಿತು ಕಾನ್ಪುರ-ಪ್ರತಾಪ್‌ಗಢ್ ರೈಲು ಸಂಚಾರಕ್ಕೆ ತಡೆ ಒಡ್ಡಿದರು.
ಅಖಿಲ ಭಾರತೀಯ ಉದ್ಯೋಗ್ ವ್ಯಾಪಾರ್ ಮಂಡಲ್‌ನ ನಾಯಕ ಗ್ಯಾನೇಂದ್ರ ಮಿಶ್ರಾ ನೇತೃತ್ವದಲ್ಲಿ ವ್ಯಾಪಾರಸ್ಥರು ಲಕ್ನೋ ರೈಲ್ವೇ ಕ್ರಾಸಿಂಗ್‌ನಲ್ಲಿ ಪ್ರತಿಭಟನೆ ನಡೆಸಿದರು. ಹಾಗೂ ಲೋಕಲ್ ರೈಲನ್ನು ತಡೆ ಹಿಡಿದರು.
ಜಿಆರ್‌ಪಿ ಸಿಬಂದಿ ಧಾವಿಸಿ ಪ್ರತಿಭಟನಕಾರರನ್ನು ತೆರವುಗೊಳಿಸಿದ ಬಳಿಕ ರೈಲು ಸಂಚಾರ ಮುಂದುವರಿಯಿತು. ಮುಖ್ಯ ರೈಲು ನಿಲ್ದಾಣದಲ್ಲಿ ಪ್ರತಿಭಟನಕಾರರು ಯಾವುದೇ ತೊಂದರೆ ಉಂಟು ಮಾಡಿಲ್ಲ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.
ಜಿಎಸ್‌ಟಿ ಜಾರಿಗಳಿಸುತ್ತಿರುವುದನ್ನು ವಿರೋಧಿಸಿ ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ಸಂಘಟನೆ ಕಾರ್ಯಕರ್ತರು ಪ್ರತಿಭಟನ ಮೆರವಣಿಗೆ ನಡೆಸಿದರು. ಇದರಿಂದ ಸಗಟು ಹಾಗೂ ಚಿಲ್ಲರೆ ಅಂಗಡಿಗಳು ಮುಚ್ಚಿದ್ದವು.
ಉತ್ತರಪ್ರದೇಶ ಉದ್ಯೋಗ್ ವ್ಯಾಪಾರ್ ಪ್ರತಿನಿಧಿ ಮಂಡಲ್ 50 ವ್ಯಾಪಾರ ಸಂಘಟನೆಗಳ ಬೆಂಬಲದೊಂದಿಗೆ ಈ ಬಂದ್‌ಗೆ ಕರೆ ನೀಡಿತ್ತು.
ಬಂದ್‌ನಿಂದ 2.000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.