ತೈವಾನ್‌ಗೆ ಅಮೆರಿಕದಿಂದ ಭಾರೀ ಶಸ್ತ್ರಾಸ್ತ್ರ ಮಾರಾಟ: ಚೀನಾ ಆಕ್ರೋಶ
ಬೀಜಿಂಗ್, ಜೂ. 30: ತೈವಾನ್‌ಗೆ 1.42 ಬಿಲಿಯ ಡಾಲರ್ (ಸುಮಾರು 9,200 ಕೋಟಿ ರೂಪಾಯಿ) ವೌಲ್ಯದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ‘ತಪ್ಪು’ ನಿರ್ಧಾರವನ್ನು ತುರ್ತಾಗಿ ಹಿಂದಕ್ಕೆ ಪಡೆಯುವಂತೆ ಅಮೆರಿಕದಲ್ಲಿರುವ ಚೀನಾದ ರಾಯಭಾರ ಕಚೇರಿ ಅಮೆರಿಕವನ್ನು ಒತ್ತಾಯಿಸಿದೆ.
‘‘ಈ ನಿರ್ಧಾರದಿಂದ ಆಕ್ರೋಶಗೊಳ್ಳುವ ಎಲ್ಲ ಹಕ್ಕು ಚೀನಾ ಸರಕಾರ ಮತ್ತು ಚೀನಾ ಜನತೆಗೆ ಇದೆ’’ ಎಂದು ಗುರುವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ರಾಯಭಾರ ಕಚೇರಿ ಹೇಳಿದೆ. ಶಸ್ತ್ರಾಸ್ತ್ರ ಮಾರಾಟ ನಿರ್ಧಾರವು ‘ತೈವಾನ್ ಸ್ವಾತಂತ್ರ’ ಪಡೆಗಳಿಗೆ ತಪ್ಪು ಸಂದೇಶವನ್ನು ನೀಡುತ್ತದೆ ಎಂದಿದೆ.
ತೈವಾನ್ ತನಗೆ ಸೇರಿದ್ದು ಎಂಬುದಾಗಿ ಚೀನಾ ಭಾವಿಸಿದೆ ಹಾಗೂ ಅದರ ಏಕೈಕ ಶಸ್ತ್ರಾಸ್ತ್ರ ಪೂರೈಕೆದಾರನಾಗಿದೆ.
ಸ್ವಯಂ ಆಡಳಿತದ ದ್ವೀಪವನ್ನು ತನ್ನ ನಿಯಂತ್ರಣಕ್ಕೆ ತರುವುದಕ್ಕಾಗಿ ಬಲಪ್ರಯೋಗ ಮಾಡುವ ಸಾಧ್ಯತೆಯನ್ನು ಚೀನಾ ಯಾವತ್ತೂ ತಳ್ಳಿಹಾಕಿಲ್ಲ.
ಏಳು ಪ್ರಸ್ತಾಪಿತ ಶಸ್ತ್ರಾಸ್ತ್ರ ಮಾರಾಟ ಯೋಜನೆಗಳ ಬಗ್ಗೆ ಟ್ರಂಪ್ ಆಡಳಿತವು ಕಾಂಗ್ರೆಸ್‌ಗೆ ತಿಳಿಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಹೆದರ್ ನೋವರ್ಟ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.