2030ಕ್ಕೆ ಚಂದ್ರನ ಅಂಗಳಕ್ಕೆ ಗಗನಯಾತ್ರಿ: ಜಪಾನ್ ಘೋಷಣೆ
Update: 2017-06-30 19:40 IST
ಟೋಕಿಯೊ, ಜೂ. 30: 2030ರ ವೇಳೆಗೆ ಚಂದ್ರನ ಮೇಲೆ ಗಗನಯಾತ್ರಿಯೊಬ್ಬನನ್ನು ಇಳಿಸುವ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಜಪಾನ್ ಘೋಷಿಸಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಆಚೆಗೆ ಗಗನಯಾತ್ರಿಯೊಬ್ಬನನ್ನು ಕಳುಹಿಸಲು ಉದ್ದೇಶಿಸಿರುವುದಾಗಿ ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜನ್ಸಿ (ಜೆಎಎಕ್ಸ್‌ಎ) ಹೇಳಿರುವುದು ಇದೇ ಮೊದಲ ಬಾರಿಯಾಗಿದೆ.
ತನ್ನ ಯೋಜನೆಯ ಭಾಗವಾಗಿ ಜಪಾನ್ ಮೊದಲು, ಚಂದ್ರನ ಕಕ್ಷೆಯಲ್ಲಿ ಬಾಹ್ಯಾಕಾಶ ನಿಲ್ದಾಣವೊಂದನ್ನು ನಿರ್ಮಿಸುವುದಕ್ಕಾಗಿ 2025ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ನೇತೃತ್ವದ ಕಾರ್ಯಕ್ರಮದೊಂದಿಗೆ ಕೈಜೋಡಿಸಲಿದೆ.
ಮಂಗಳ ಗ್ರಹವನ್ನು ತಲುಪುವ ದೀರ್ಘಾವಧಿ ಯೋಜನೆಯ ಭಾಗವಾಗಿ ನಾಸಾ ಚಂದ್ರನ ಕಕ್ಷೆಯಲ್ಲಿ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುತ್ತಿದೆ.