ಬೌದ್ಧ ಧರ್ಮ ಕಾಲದಲ್ಲಿ ದಾರ್ಶನಿಕ ಸಂಘರ್ಷ: ಪೇಜಾವರ ಶ್ರೀ

Update: 2017-06-30 14:27 GMT

ಉಡುಪಿ, ಜೂ.30: ಬೌದ್ಧ ಧರ್ಮದ ಕಾಲಘಟ್ಟ ದಾರ್ಶನಿಕ ಸಂಘರ್ಷದ ಕಾಲವಾಗಿತ್ತು. ಅಂದು ಮೀಮಾಂಸಕರ ವೈದಿಕ ದರ್ಶನ, ಶಂಕಾರಾಚಾರ್ಯರ ವೈದಿಕ ದರ್ಶನ, ಬೌದ್ಧ ಹಾಗೂ ಜೈನ ದರ್ಶನಗಳ ನಡುವೆ ತಿಕ್ಕಾಟ ಸಂಘರ್ಷಗಳು ನಡೆದು ದೊಡ್ಡ ಕೋಲಾಹಲವೇ ಈ ದೇಶದಲ್ಲಿ ಉಂಟಾಗಿತ್ತು. ಇದ ರಿಂದ ಒಂದರ ಪ್ರಭಾವ ಇನ್ನೊಂದರ ಮೇಲೆ ಬೀರಿತ್ತು ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಬೆಂಗಳೂರು ಪೂರ್ಣಪ್ರಜ್ಞ ಸಂಶೋಧನ ಮಂದಿರ ಮತ್ತು ಕಲಬುರಗಿ ಪಾಲಿ ಇನ್‌ಸ್ಟಿಟ್ಯೂಟ್‌ನ ಜಂಟಿ ಆಶ್ರಯದಲ್ಲಿ ಉಡುಪಿ ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಬೌದ್ಧದರ್ಶನದ ವಿವಿಧ ಆಯಾಮಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಬೌದ್ಧ ಧರ್ಮವು ಜಗತ್ತಿನಾದ್ಯಂತ ಹೆಚ್ಚು ಪ್ರಚಾರ ಹೊಂದಿರುವ ಧರ್ಮವಾಗಿದೆ. ಬೌದ್ಧ ಧರ್ಮದ ಎರಡು ಮುಖಗಳಲ್ಲಿ ಒಂದು ಮಾನವೀಯ ಸಂದೇಶ ಮತ್ತೊಂದು ದಾರ್ಶನಿಕ ಸ್ವರೂಪ. ಇದರಲ್ಲಿ ದಾರ್ಶನಿಕ ಸ್ವರೂಪದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಇಂದು ಜಗತ್ತಿನಲ್ಲಿ ಬೌದ್ಧಧರ್ಮದ ದಾರ್ಶನಿಕ ಮುಖ ಯಾವುದು ಎಂಬುದರ ಬಗ್ಗೆ ಅರಿತುಕೊಂಡು ವಿಮರ್ಶೆ ಮಾಡಬೇಕಾಗಿದೆ ಎಂದರು.

ಬೌದ್ಧ ಧರ್ಮ ಅಂದರೆ ಏನು, ಅದರ ದರ್ಶನ, ತತ್ವಜ್ಞಾನಗಳ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಜಗತ್ತಿನ ಎಲ್ಲ ಕಡೆ ಇರುವ ಬೌದ್ಧ ಧರ್ಮ ಒಂದೇ ರೀತಿ ಇದೆಯೆ, ಅದರ ನಡುವೆ ಅಂತರ ಇದೆಯೇ, ವಿವಿಧ ದೇಶಗಳ ಬೌದ್ಧಧರ್ಮಗಳ ದರ್ಶನ ಯಾವುದು, ಬೌದ್ಧಧರ್ಮವನ್ನು ತಿಳಿದುಕೊಳ್ಳಲು ಯಾವ ಧರ್ಮ ಓದಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ಬೌದ್ಧ ಧರ್ಮದ ಯಾನಗಗಳ ತಾತ್ವಿಕ ಬೇಧ ಏನು, ಇದರ ನಡುವಿನ ಭಿನ್ನತೆ ಏನು. ಇದರಲ್ಲಿ ಇಂದು ಯಾವುದು ಪ್ರಚಲಿತವಾಗಿದೆ ಎಂಬುದು ಗೊತ್ತಿಲ್ಲ. ಬೌದ್ಧ ಧರ್ಮ ಸ್ವೀಕರಿಸಿದವರಿಗೆ ಬೌದ್ಧ ತತ್ವಜ್ಞಾನ ಏನು ಎಂಬುದು ತಿಳಿದಿಲ್ಲ. ಆದುದರಿಂದ ಬೌದ್ಧ ಧರ್ಮದ ತಾತ್ವಿಕ ಸ್ವರೂಪ ಏನು ಎಂಬುದು ಅರಿಯು ವುದು ಮುಖ್ಯ ಎಂದು ಅವರು ಹೇಳಿದರು.

ಕಲಬುರಗಿ ಪಾಲಿ ಇನ್‌ಸ್ಟಿಟ್ಯೂಟ್‌ನ ಗೌರವ ನಿರ್ದೇಶಕ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ದಿಕ್ಸೂಚಿ ಭಾಷಣ ಮಾಡಿ, ಬುದ್ಧ ತನ್ನ ತತ್ವ ಚಿಂತನೆಯನ್ನು ಮಧ್ಯಮ ಮಾರ್ಗದ ಮೂಲಕ ಹೇಳುತ್ತಾನೆ. ಇದೇ ಮಾರ್ಗದ ಮೂಲಕ ಬುದ್ಧ ಧರ್ಮವನ್ನು ಭಾರತ ಸೇರಿದಂತೆ ಇಡೀ ಜಗತ್ತಿಗೆ ವಿಸ್ತರಿಸಿದನು. ಬುದ್ಧ ಮಾಂಸಹಾರ ಸೇವನೆ ಮಾಡುತ್ತಿದ್ದ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಇದಕ್ಕೆ ನಿಖರವಾದ ಆಧಾರ ಸಿಕ್ಕಿಲ್ಲ ಎಂದರು.

ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಲಬುರಗಿ ಪಾಲಿ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ರಾಹುಲ್ ಖರ್ಗೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ವಾಮೀಜಿಗಳು ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News