×
Ad

ಸಿರಿಯ: ನಾಗರಿಕರ ಮೇಲೆ ಪ್ರಯೋಗಿಸಿದ್ದು ‘ಸಾರಿನ್’

Update: 2017-06-30 21:40 IST

ಆ್ಯಂಸ್ಟರ್‌ಡಾಮ್, ಜೂ. 30: ಸಿರಿಯದ ಉತ್ತರ ಭಾಗದ ಪಟ್ಟಣವೊಂದರಲ್ಲಿ ಎಪ್ರಿಲ್‌ನಲ್ಲಿ ನಡೆದ ರಾಸಾಯನಿಕ ದಾಳಿಯಲ್ಲಿ ನಿಷೇಧಿತ ನರ್ವ್ ಏಜಂಟ್ ‘ಸಾರಿನ್’ ಬಳಸಲಾಗಿದೆ ಎಂದು ಜಾಗತಿಕ ರಾಸಾಯನಿಕ ಅಸ್ತ್ರಗಳ ಕಾವಲು ಸಂಸ್ಥೆ ‘ರಾಸಾಯನಿಕ ಅಸ್ತ್ರಗಳ ನಿಷೇಧಕ್ಕಾಗಿನ ಸಂಘಟನೆ’ (ಒಪಿಸಿಡಬ್ಲು) ಹೇಳಿದೆ.

 ಉತ್ತರದ ರಾಜ್ಯ ಇದ್ಲಿಬ್‌ನ ಖಾನ್ ಶೈಖೂನ್ ಪಟ್ಟಣದಲ್ಲಿ ಎಪ್ರಿಲ್ 4ರಂದು ನಡೆದ ದಾಳಿಯಲ್ಲಿ ನೂರಕ್ಕೂ ಅಧಿಕ ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದರು. ಅದು ಸಿರಿಯದ ಆಂತರಿಕ ಯುದ್ಧದ ಇತಿಹಾಸದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿತ್ತು.

ಹೇಗ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಪಿಸಿಡಬ್ಲು ಸದಸ್ಯರಿಗೆ ವರದಿಯ ಪ್ರತಿಗಳನ್ನು ಒದಗಿಸಲಾಗಿದೆ. ಆದರೆ ಅದನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿಲ್ಲ.

ಈ ರಾಸಾಯನಿಕ ದಾಳಿ ನಡೆದ ಬೆನ್ನಿಗೇ, ಅಮೆರಿಕವು ಸಿರಿಯದ ವಾಯುನೆಲೆಯೊಂದರ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು.

ಸಾಕ್ಷಿಗಳೊಂದಿಗೆ ಮಾತನಾಡಿ ಹಾಗೂ ಮಾದರಿಗಳನ್ನು ಪರಿಶೀಲಿಸಿದ ಬಳಿಕ, ಒಪಿಸಿಡಬ್ಲುನ ಸತ್ಯಶೋಧನಾ ತಂಡವೊಂದು ವರದಿ ತಯಾರಿಸಿದೆ. ‘‘ಭಾರೀ ಸಂಖ್ಯೆಯ ಜನರ ಮೇಲೆ ಸಾರಿನ್ ಅಥವಾ ಸಾರಿನ್‌ನಂಥ ಪದಾರ್ಥವನ್ನು ಪ್ರಯೋಗಿಸಲಾಗಿದೆ ಹಾಗೂ ಅವರ ಪೈಕಿ ಹಲವು ಮಂದಿ ಮೃತಪಟ್ಟಿದ್ದಾರೆ’’ ಎಂದು ವರದಿ ಹೇಳಿದೆ.

‘‘ಸಾರಿನ್‌ನಂಥ ಪದಾರ್ಥವನ್ನು ರಾಸಾಯನಿಕ ಅಸ್ತ್ರವಾಗಿ ಮಾತ್ರ ಈ ರೀತಿಯಾಗಿ ಬಿಡುಗಡೆ ಮಾಡಲು ಸಾಧ್ಯ ಎಂಬ ನಿರ್ಧಾರಕ್ಕೆ ಸತ್ಯ ಶೋಧನಾ ತಂಡ ಬಂದಿದೆ’’ ಎಂದು ವರದಿ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News