ತುಂಬೆ ‘ವೆಂಟೆಡ್ ಡ್ಯಾಂ’ ಇನ್ನು ನೆನಪು ಮಾತ್ರ

Update: 2017-07-02 04:33 GMT

* 24 ವರ್ಷ ಮಂಗಳೂರಿನ ದಾಹ ತಣಿಸಿದ ಅಣೆಕಟ್ಟು

ಬಂಟ್ವಾಳ, ಜು.2: ಇಪ್ಪತ್ತನಾಲ್ಕು ವರ್ಷಗಳ ಕಾಲ ಸರ್ವ ಋತುವಿನಲ್ಲೂ ಮಂಗಳೂರು ಜನತೆಗೆ ನೀರು ಪೂರೈಸಿದ ತುಂಬೆ ‘ವೆಂಟೆಡ್ ಡ್ಯಾಂ’ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಹೊಸ ವೆಂಟೆಡ್ ಡ್ಯಾಂ ನಿರ್ಮಾಣದಿಂದ ನೀರಿನಲ್ಲಿ ಮುಳುಗಿರುವ ಹಳೆಯ ಡ್ಯಾಂ ಇನ್ನು ಏನಿದ್ದರೂ ನೆನಪು ಮಾತ್ರ.

ಅತೀ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರತೊಡಗಿದ್ದು, ಹೊಸ ಡ್ಯಾಂವೊಂದರ ನಿರ್ಮಾ ಣಕ್ಕೆ ಯೋಜನೆ ರೂಪಿಸಲಾಗಿತ್ತು. 1989ರಲ್ಲಿ ಡ್ಯಾಂ ನಿರ್ಮಾಣದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿತ್ತು. 1993ರಲ್ಲಿ ಕಾಮಗಾರಿ ಮುಕ್ತಾಯಗೊಂಡು ಅದೇ ವರ್ಷದ ಎ. 19ರಂದು ಅಂದಿನ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿಯವರಿಂದ ಲೋಕಾ ರ್ಪಣೆಗೊಂಡಿತ್ತು. ಆ ವೇಳೆ ಈ ಡ್ಯಾಂ ನಿರ್ಮಾ ಣಕ್ಕೆ 1ಕೋ.ರೂ. ವೆಚ್ಚ ತಗಲಿದೆ.

ವೆಂಟೆಡ್ ಡ್ಯಾಂ ನಿರ್ಮಾಣಕ್ಕಿಂತ ಮೊದಲು ಮಂಗಳೂರಿಗೆ ನೀರು ಪೂರೈಸಲು ಈ ಭಾಗದಲ್ಲಿ ಡ್ಯಾಂ ವೊಂದಿತ್ತು. ಆದರೆ ಅದು ಕಾಂಕ್ರಿಟ್ ಕಂಬ ಗಳ ನಡುವೆ ಕಬ್ಬಿಣದ ಗೇಟ್‌ಗಳನ್ನು ಅಳವಡಿಸಿ ನೀರು ಶೇಖರಿಸುವ ವ್ಯವಸ್ಥೆ ಆಗಿರಲಿಲ್ಲ. ಗೋಣಿ ಚೀಲಗಳಿಗೆ ಮಣ್ಣು ತುಂಬಿಸಿ ಒಂದರ ಮೇಲೊಂದನ್ನಿಟ್ಟು ನೀರು ಶೇಖರಿಸಲಾಗುತ್ತಿತ್ತು. ಆದರೆ ಮಳೆಗಾಲ ತೀವ್ರಗೊಳ್ಳುತ್ತಿದ್ದಂತೆ ಈ ಗೋಣಿಚೀಲ ಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದವು. ಮಳೆಗಾಲ ಮುಗಿದು ನದಿಯಲ್ಲಿ ನೀರಿನ ಹರಿವು ಕಡಿಯಾಗುತ್ತಿದ್ದಂತೆ ಮತ್ತೆ ಗೋಣಿ ಚೀಲಗಳಿಗೆ ಮಣ್ಣು ತುಂಬಿಸಿ ಡ್ಯಾಂ ನಿರ್ಮಾಣ ಮಾಡಲಾಗುತ್ತಿತ್ತು. ವರ್ಷಂಪ್ರತಿ ಈ ರೀತಿ ಮಾಡುವುದು ಮನಪಾಕ್ಕೆ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಂಕ್ರಿಟ್ ಕಂಬಗಳ ಡ್ಯಾಂ ನಿರ್ಮಾಣ ಮಾಡಲಾಯಿತು.

ಕಾರ್ಯ ಸ್ಥಗಿತಗೊಳಿಸಿದ 4 ಮೀಟರ್ ಎತ್ತರದ ಹಳೆಯ ವೆಂಟೆಡ್ ಡ್ಯಾಂ 134 ಕಂಬಗಳನ್ನು ಹೊಂದಿದೆ. ನದಿಯಲ್ಲಿ ಎತ್ತರ ತಗ್ಗು ಇರುವುದರಿಂದ ಪ್ರತಿಯೊಂದು ಕಂಬಗಳ ನಡುವೆ 4ರಿಂದ 8ರವೆಗೆ ಗೇಟ್‌ಗಳನ್ನು ಹಾಕಲಾಗುತ್ತದೆ. ಹೀಗೆ ಒಟ್ಟು 865 ಕಬ್ಬಿಣದ ಗೇಟ್‌ಗಳು ಇವೆ. ಪ್ರತಿಯೊಂದು ಗೇಟ್ ಒಂದೂವರೆ ಅಡಿ ಎತ್ತರ ನಾಲ್ಕುವರೆ ಅಡಿ ಅಗಲವನ್ನು ಹೊಂದಿದೆ ಮತ್ತು 165 ಕೆ.ಜಿ. ಭಾರ ತೂಗುತ್ತದೆ. ನೀರು ಹೊರ ಬರ ದಂತೆ ಗೇಟ್‌ನ ಎಡ, ಬಲ ಮತ್ತು ಅಡಿ ಭಾಗದಲ್ಲಿ ರಬ್ಬರ್ ಪಟ್ಟಿ ಇದೆ. ಡಿಸೆಂಬರ್ ಅಂತ್ಯದಲ್ಲಿ ಡ್ಯಾಂಗೆ ಗೇಟ್‌ಗಳನ್ನು ಅಳವಡಿಸುವುದು ವಾಡಿಕೆ. ಮಳೆ ಗಾಲ ಆರಂಭವಾಗುತ್ತಿದ್ದಂತೆ ಈ ಗೇಟ್‌ಗಳನ್ನು ತೆರವುಗೊಳಿಸಲಾಗುತ್ತಿತ್ತು.

2016ರ ಬೇಸಿಗೆಯಲ್ಲಿ ತುಂಬೆ ಡ್ಯಾಂನಲ್ಲಿ ನೀರು ಖಾಲಿಯಾಗಿ ಮಂಗಳೂರು ಜನತೆ ಕುಡಿಯುವ ನೀರಿಗಾಗಿ ಆಹಾಕಾರ ಪಟ್ಟಿದ್ದರು. ಅಲ್ಲದೆ ಕಳೆದ ಮಳೆಗಾಲದಲ್ಲೂ ವಾಡಿಕೆಗಿಂತ ಕಡಿಮೆ ಮಳೆ ಯಾಗಿದ್ದರಿಂದ 2016ರ ಡಿಸೆಂಬರ್ ಆರಂಭದಲ್ಲೇ ತುಂಬೆ ವೆಂಟೆಡ್ ಡ್ಯಾಂಗೆ ಗೇಟ್‌ಗಳನ್ನು ಅಳವಡಿಸಲಾಗಿತ್ತು. ಇದೀಗ ಅಳವಡಿಸಿದ್ದ ಗೇಟ್‌ಗಳನ್ನು ತೆಗೆಯಲಾಗಿದೆ. ಇನ್ನೆಂದೂ ಈ ಡ್ಯಾಂಗೆ ಗೇಟ್‌ಗಳನ್ನು ಅಳವಡಿಸುವ ಅಗತ್ಯ ಬೀಳುವುದಿಲ್ಲ. ಮುಂದಿನ ಬೇಸಿಗೆಯಲ್ಲಿ ಹೊಸ ಡ್ಯಾಂನಲ್ಲಿ 7 ಮೀ. ನೀರು ಶೇಖರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಕಳೆದ ಮಾರ್ಚ್ ನಲ್ಲಿ ಹೊಸ ಡ್ಯಾಂನಲ್ಲಿ 5 ಮೀಟರ್ ನೀರು ಶೇಖರಣೆ ಮಾಡಿದ್ದು, ಹಳೆ ಡ್ಯಾಂ ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಇನ್ನು ವರ್ಷ ಪೂರ್ತಿ ನೀರಿನಲ್ಲಿ ಮುಳುಗಡೆ ಯಾಗುವುದರಿಂದ ಹಳೆಯ ಡ್ಯಾಂ ಕ್ರಮೇಣ ಕಣ್ಮರೆಯಾಗಲಿದೆ.

ಡ್ಯಾಂ ಮೇಲೊಂದು ದಾರಿ
ಮಂಗಳೂರಿಗೆ ಕುಡಿಯುವ ನೀರು ಪೂರೈಸಲೆಂದು ನಿರ್ಮಾಣವಾದ ತುಂಬೆ ವೆಂಟೆಡ್ ಡ್ಯಾಂ ಸಜಿಪ ಮುನ್ನೂರು ಗ್ರಾಮದ ಜನರಿಗೆ ದಾರಿಯಾಗಿತ್ತು. ಫರಂಗಿಪೇಟೆ, ತುಂಬೆ, ಕೈಕಂಬ, ಬಿ.ಸಿ.ರೋಡ್ ಪ್ರದೇಶಗಳಿಗೆ ಬರುವ ಸಜಿಪ ಮುನ್ನೂರಿನ ಜನರು ಮೆಲ್ಕಾರ್ ಮೂಲಕ ಸುತ್ತುಬಳಸಿ ಬರುವುದರ ಬದಲು ಡ್ಯಾಂ ಮೇಲಿನಿಂದ ನಡೆದು ಕೊಂಡು ಬರುತ್ತಾರೆ ಹಾಗೆಯೇ ಹೋಗುತ್ತಾರೆ. ಹೀಗೆ ಬರುವುದರಿಂದ ಖರ್ಚಿನೊಂದಿಗೆ ಸಮಯವೂ ಉಳಿತಾಯ ವಾಗುತ್ತದೆ. ಹಳೆ ಡ್ಯಾಂ ಮುಳುಗಡೆಯಾಗಿದ್ದರಿಂದ ಹೊಸ ಡ್ಯಾಂನ ಮೇಲಿಂದ ಸಜಿಪ ಮುನ್ನೂರಿನ ಜನರು ಹೋಗಿ ಬರುತ್ತಿದ್ದಾರೆ.


1993ರಲ್ಲಿ 4 ಮೀ. ಎತ್ತರದ ಹೊಸ ಕಾಂಕ್ರಿಟ್ ವೆಂಟೆಡ್ ಡ್ಯಾಂ ನಿರ್ಮಾಣ ಆದ ಬಳಿಕ ಗೋಣಿ ಚೀಲಗಳಿಗೆ ಮಣ್ಣು ತುಂಬಿಸಿ ನೀರು ಶೇಖರಣೆ ಮಾಡುವುದು ನಿಂತಿತ್ತು. ಪ್ರಸ್ತುತ 12 ಮೀ. ಎತ್ತರದ ಇನ್ನೊಂದು ಹೊಸ ಡ್ಯಾಂ ನಿರ್ಮಾಣವಾಗಿದೆ. ಹಳೆಯ ಡ್ಯಾಂ ಕಾರ್ಯ ಸ್ಥಗಿತಗೊಳಿಸಲಾಗಿದೆ. ಹಳೆ ಡ್ಯಾಂಗೆ ಗೇಟ್ ಅಳವಡಿಸುವುದು ಒಂದು ಸಾಹಸದ ಕೆಲಸವಾಗಿದೆ. ಬಾಗಿಲು ಅಳವಡಿಸಲು ಮತ್ತು ತೆಗೆಯಲು 10 ಜನರಂತೆ ಒಂದು ತಿಂಗಳ ಕೆಲಸ ಇದೆ.

- ಅಬ್ದುಲ್ ಹಮೀದ್, ಡ್ಯಾಂ ಸಹಾಯಕ

Writer - ವರದಿ: ಇಮ್ತಿಯಾಝ್ ಶಾ ತುಂಬೆ

contributor

Editor - ವರದಿ: ಇಮ್ತಿಯಾಝ್ ಶಾ ತುಂಬೆ

contributor

Similar News