ಈಡೇರಿಸಲಾಗದ ಬೇಡಿಕೆಗಳ ಸಲ್ಲಿಕೆ: ಕತರ್

Update: 2017-07-02 13:27 GMT

ರೋಮ್ (ಇಟಲಿ), ಜು. 2: ತಿರಸ್ಕರಿಸುವಂಥ ಬೇಡಿಕೆಗಳನ್ನೇ ನಾಲ್ಕು ಅರಬ್ ದೇಶಗಳು ಕತರ್‌ಗೆ ಸಲ್ಲಿಸಿವೆ ಎಂದು ಕತರ್ ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ರಹಮಾನ್ ಅಲ್-ಥಾನಿ ಶನಿವಾರ ಹೇಳಿದ್ದಾರೆ.

ಅವರು ನೀಡಿರುವ ಗಡುವು ಭಯೋತ್ಪಾದನೆಯನ್ನು ನಿಭಾಯಿಸುವ ಗುರಿ ಹೊಂದಿಲ್ಲ, ಬದಲಿಗೆ ತನ್ನ ದೇಶದ ಸಾರ್ವಭೌಮತ್ವವನ್ನು ಕಡಿತಗೊಳಿಸುವ ಉದ್ದೇಶವನ್ನು ಮಾತ್ರ ಹೊಂದಿದೆ ಎಂದು ರೋಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನುಡಿದರು.

ಆದಾಗ್ಯೂ, ತನ್ನ ನೆರೆ ದೇಶಗಳು ಹೊಂದಿರುವ ಕಳವಳಗಳ ಬಗ್ಗೆ ಜೊತೆಗೆ ಕುಳಿತು ಮಾತುಕತೆ ನಡೆಸಲು ದೋಹಾ ಈಗಲೂ ಸಿದ್ಧವಿದೆ ಕತರ್ ವಿದೇಶ ಸಚಿವರು ತಿಳಿಸಿದರು.

ತಾವು ಸಲ್ಲಿಸಿರುವ ಬೇಡಿಕೆಗಳನ್ನು ಈಡೇರಿಸಲು ಸೌದಿ ಅರೇಬಿಯ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಹರೈನ್ ಮತ್ತು ಈಜಿಪ್ಟ್ ನಿಗದಿಪಡಿಸಿರುವ ಗಡುವು ಮುಕ್ತಾಯಗೊಳ್ಳುವ ಮುನ್ನ ಕತರ್ ವಿದೇಶ ಸಚಿವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬುದಾಗಿ ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್, ಈಜಿಪ್ಟ್ ಮತ್ತು ಇತರ ಕೆಲವು ದೇಶಗಳು ಆ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದನ್ನು ಇಲ್ಲಿ ಸ್ಮರಿಸಬುದಾಗಿದೆ.

ಬಿಕ್ಕಟ್ಟನ್ನು ಕೊನೆಗೊಳಿಸುವವ ನಿಟ್ಟಿನಲ್ಲಿ ಈ ದೇಶಗಳು 13 ಬೇಡಿಕೆಗಳನ್ನೊಳಗೊಂಡ ಪಟ್ಟಿಯೊಂದನ್ನು ಕತರ್‌ಗೆ ಸಲ್ಲಿಸಿದ್ದವು ಹಾಗೂ ಅವುಗಳನ್ನು ಈಡೇರಿಸಲು 10 ದಿನಗಳ ಗಡುವು ವಿಧಿಸಿದ್ದವು.

ತಾನು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದೇನೆ ಎಂಬ ಆರೋಪಗಳನ್ನು ಕತರ್ ನಿರಾಕರಿಸಿದೆ.

‘‘ಬೇಡಿಕೆಗಳ ಪಟ್ಟಿಯನ್ನು ತಿರಸ್ಕರಿಸುವುದಕ್ಕಾಗಿಯೇ ಮಾಡಲಾಗಿದೆ. ಸ್ವೀಕರಿಸುವುದಕ್ಕಾಗಿ ಅಥವಾ ಮಾತುಕತೆ ನಡೆಸುವುದಕ್ಕಾಗಿ ಆ ಬೇಡಿಕೆಗಳ ಪಟ್ಟಿಯನ್ನು ಮಾಡಲಾಗಿಲ್ಲ’’ ಎಂದು ಶೇಖ್ ಮುಹಮ್ಮದ್ ಅಭಿಪ್ರಾಯಪಟ್ಟರು.

ಸರಿಯಾದ ಪರಿಸ್ಥಿತಿ ಏರ್ಪಟ್ಟರೆ ಮುಂದಿನ ಮಾತುಕತೆಯಲ್ಲಿ ತೊಡಗಿಕೊಳ್ಳಲು ಕತರ್ ಸಿದ್ಧವಿದೆ ಎಂದರು.

ಪ್ರಮುಖ ಬೇಡಿಕೆಗಳು

ಭಯೋತ್ಪಾದಕ ಗುಂಪುಗಳೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕು, ಅರೇಬಿಕ್ ಉಪಗ್ರಹ ಚಾನೆಲ್ ‘ಅಲ್-ಜಝೀರ’ವನ್ನು ಮುಚ್ಚಬೇಕು, ಇರಾನ್ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಬೇಕು ಮತ್ತು ಕತರ್‌ನಲ್ಲಿರುವ ಟರ್ಕಿಯ ವಾಯುನೆಲೆಯನ್ನು ಮುಚ್ಚಬೇಕು- ಇವು ಕೊಲ್ಲಿ ಅರಬ್ ದೇಶಗಳು ಕತರ್ ಮುಂದಿಟ್ಟ ಬೇಡಿಕೆಗಳ ಪೈಕಿ ಕೆಲವು.

ಅದೇ ವೇಳೆ, ಈ ಬೇಡಿಕೆಗಳ ಬಗ್ಗೆ ಯಾವುದೇ ಮಾತುಕತೆಯಿಲ್ಲ ಎಂಬುದಾಗಿ ಅರಬ್ ದೇಶಗಳು ಹೇಳಿವೆ ಹಾಗೂ ಬೇಡಿಕೆಗಳನ್ನು ಈಡೇರಿಸದಿದ್ದರೆ ದಂಡನಾ ಕ್ರಮಗಳು ಜಾರಿಗೆ ಬರುತ್ತವೆ ಎಂಬುದಾಗಿ ಅವು ಎಚ್ಚರಿಸಿವೆ.

ಮಾತುಕತೆಯೇ ಮುಖ್ಯ: ಪುಟಿನ್

ಕತರ್ ಮತ್ತು ಅದರ ನೆರೆಯ ಅರಬ್ ದೇಶಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಸಂಧಾನವೇ ಪ್ರಧಾನ ಎಂದುದ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ ಎಂದು ಕ್ರೆಮ್ಲಿನ್ ಶನಿವಾರ ಹೇಳಿದೆ.

ಕತರ್ ಅಮೀರ್ ಶೇಖ್ ತಮೀಮ್ ಬಿನ್ ಹಾಮದ್ ಅಲ್-ಥಾನಿ ಜೊತೆ ಟೆಲಿಫೋನ್‌ನಲ್ಲಿ ಮಾತುಕತೆ ನಡೆಸಿದ ವೇಳೆ ಅವರು ಈ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News