ಹಲವು ರಾಜ್ಯಗಳಲ್ಲಿ ಭಾರೀ ಮಳೆ: ಅಸ್ಸಾಂನಲ್ಲಿ ಪ್ರವಾಹ
ಹೊಸದಿಲ್ಲಿ, ಜು. 2: ಹಲವು ರಾಜ್ಯಗಳಿಗೆ ಆಗ್ನೇಯ ಮುಂಗಾರು ಮುಂಚಿತವಾಗಿ ಕಾಲಿರಿಸಿದ್ದು, ದೇಶದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.ಇದರಿಂದ ಹಲವು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ರವಿವಾರ ಸುರಿದ ಭಾರೀ ಮಳೆಯಿಂದ ಗುಜರಾತ್‌ನ ಹಲವು ಭಾಗಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ.
ಅಸ್ಸಾಂನಲ್ಲಿ ನೆರೆ ಉದ್ಭವಿಸಿದೆ. ಹೊಸದಿಲ್ಲಿಯ ತಂಕರಾದಲ್ಲಿ ಕಳೆದ 24 ಗಂಟೆಗಳಲ್ಲಿ 280 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಸೃಷ್ಟಿಯಾದ ಪ್ರವಾಹದಲ್ಲಿ ಸಿಲುಕಿದ 14 ಜನರನ್ನು ವಿಕೋಪ ನಿರ್ವಹಣಾ ವಿಭಾಗ ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆಯ ಸಿಬಂದಿಗಳೊಂದಿಗೆ ಸೇರಿ ರಕ್ಷಿಸಿದೆ. ಅಹ್ಮದಾಬಾದ್‌ನ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಹಿಮಾಚಲ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿದೆ. ಇದರಿಂದ ಕೊಕ್ಸಾರ್ ಸಮೀಪದ ಮನಾಲಿ-ಲೇಹ್ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಅಸ್ಸಾಮ್‌ನಲ್ಲಿ ನೆರೆ ಬಂದು ಬಾರ್ಪೇಟಾ, ಲಖಿಪುರಂ, ಜೋರ್ಹಾಟ್, ಕರೀಮ್‌ಗಂಜ್, ಕ್ಯಾಚರ್, ಧೇಮ್‌ಜಿ, ಕರ್ಬಿ ಅಂಗ್ಲೋಂಗ್ ಹಾಗೂ ಬಿಸ್ವಾಂತಂ ಜಿಲ್ಲೆಗಳಲ್ಲಿ 2.68 ಜನರು ಸಂತ್ರಸ್ತರಾಗಿದ್ದಾರೆ.