ಆಸ್ಟ್ರೇಲಿಯ-ಭಾರತ ಏಕದಿನ ಸರಣಿಗೆ ವೇತನ ಬಿಕ್ಕಟ್ಟಿನ ಕರಿಛಾಯೆ?
ಹೊಸದಿಲ್ಲಿ, ಜು.2: ಕ್ರಿಕೆಟ್ ಆಸ್ಟ್ರೇಲಿಯ(ಸಿಎ) ಹಾಗೂ ಆಸ್ಟ್ರೇಲಿಯದ ಅಗ್ರ ಕ್ರಿಕೆಟಿಗರ ನಡುವೆ ಉದ್ಭವಿಸಿರುವ ವೇತನ ವಿವಾದ ಸುಖಾಂತ್ಯ ಕಾಣದಿದ್ದರೆ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯ ತಂಡ ಭಾರತ ಪ್ರವಾಸವನ್ನು ಬಹಿಷ್ಕರಿಸುವ ಸಾಧ್ಯತೆಯಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
ರವಿವಾರ ಸಿಡ್ನಿ ಹೊಟೇಲ್‌ನಲ್ಲಿ ತುರ್ತು ಸಭೆ ಸೇರಿದ ಆಸ್ಟ್ರೇಲಿಯ ಆಟಗಾರರು ಈ ತಿಂಗಳಾಂತ್ಯದಲ್ಲಿ ದಕ್ಷಿಣ ಆಫ್ರಿಕ ಎ ತಂಡದ ವಿರುದ್ಧದ ಸರಣಿಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ನೂತನ ಪರಿಷ್ಕೃತ ವೇತನ ಜಾರಿಗೆ ಸಂಬಂಧಿಸಿ ಸಂಸ್ಥೆಯ ಜ್ಞಾಪನಾಪತ್ರಕ್ಕೆ ಸಮ್ಮತಿ ಲಭಿಸಿದ ಬಳಿಕವಷ್ಟೇ ದಕ್ಷಿಣ ಆಫ್ರಿಕಕ್ಕೆ ಪ್ರಯಾಣಿಸಲು ಆಸ್ಟ್ರೇಲಿಯ ಎ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರು ನಿರ್ಧರಿಸಿದ್ದಾರೆ.
ಈ ಹಿಂದಿನ ಜ್ಞಾಪನಾಪತ್ರದ ಅವಧಿ ಶುಕ್ರವಾರ ಮಧ್ಯರಾತ್ರಿ ಕೊನೆಗೊಂಡಿದ್ದು, ದೇಶದ ಸುಮಾರು 230 ಪ್ರಮುಖ ಕ್ರಿಕೆಟಿಗರು ನಿರುದ್ಯೋಗಿಗಳಾಗಿದ್ದಾರೆ.
ನಾವು ಪ್ರವಾಸ ಕೈಗೊಳ್ಳುವ ಉದ್ದೇಶಹೊಂದಿಲ್ಲ. ಏಕೆಂದರೆ ಶುಕ್ರವಾರದ ತನಕ ದೇಶದಿಂದ ಹೊರ ಹೋಗದಿರಲು ನಿರ್ಧರಿಸಿದ್ದೇವೆ. ಆಟಗಾರರು ಶಿಬಿರಕ್ಕೆ ತೆರಳಿ ಯೋಜನೆ ರೂಪಿಸಲಿದ್ದು, ಜ್ಞಾಪನಾಪತ್ರಕ್ಕೆ ಸಂಬಂಧಿಸಿ ಚರ್ಚೆ ನಡೆಸಲಿದ್ದೇವೆ. ಆದಾಯ ಹಂಚಿಕೆ ಮಾದರಿ ವಿಷಯಕ್ಕೆ ಸಂಬಂಧಿಸಿ ಮಹತ್ವದ ತಿರುವು ಸಿಗಬೇಕಾದ ಅಗತ್ಯವಿದೆ ಎಂದು ಆಸ್ಟ್ರೇಲಿಯ ಕ್ರಿಕೆಟ್ ಆಟಗಾರರ ಸಂಸ್ಥೆಯ ಮುಖ್ಯ ಅಧಿಕಾರಿ ಅಲಿಸ್ಟೈರ್ ನಿಕೋಲ್ಸನ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆಸ್ಟ್ರೇಲಿಯ ಕ್ರಿಕೆಟಿಗರ ಸಂಸ್ಥೆ(ಎಸಿಎ) ಹಾಗೂ ಕ್ರಿಕೆಟ್ ಆಸ್ಟ್ರೇಲಿಯ ನಡುವೆ ಮಹತ್ವದ ಬೆಳವಣಿಗೆ ನಡೆಯದೇ ಇದ್ದರೆ ಆಸ್ಟ್ರೇಲಿಯ ತಂಡ ಆಗಸ್ಟ್‌ನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿಲ್ಲ.
ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಗೆ ಮೊದಲು ಆಸ್ಟ್ರೇಲಿಯ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಭಾರತ ಪ್ರವಾಸ ರದ್ದಾದರೆ ಆಸ್ಟ್ರೇಲಿಯ ಕ್ರಿಕೆಟಿಗೆ ಆರ್ಥಿಕವಾಗಿ ಭಾರೀ ನಷ್ಟವಾಗಲಿದೆ.