ನಾಲ್ಕನೇ ನಿಗೂಢ ಪ್ರಕರಣ: ಜಯಲಲಿತಾರ ಕೊಡನಾಡು ಎಸ್ಟೇಟ್ ಸಿಬ್ಬಂದಿ ಆತ್ಮಹತ್ಯೆ

Update: 2017-07-03 17:35 GMT

ಚೆನ್ನೈ, ಜು.3: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರಿಗೆ ಸೇರಿದ್ದ ಕೊಡನಾಡು ಎಸ್ಟೇಟ್‌ನ ಅಕೌಂಟೆಂಟ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

 28 ವರ್ಷದ ದಿನೇಶ್ ಕುಮಾರ್ ಅವರ ದೇಹ ಕೊತಗಿರಿ ಎಂಬಲ್ಲಿರುವ ಅವರ ಮನೆಯ ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಈ ಎಸ್ಟೇಟ್‌ಗೆ ಸಂಬಂಧಿಸಿದ ಘಟನೆಯಲ್ಲಿ ನಾಲ್ಕನೇ ವ್ಯಕ್ತಿ ನಿಗೂಢವಾಗಿ ಮೃತಪಟ್ಟಂತಾಗಿದೆ.

 ಈ ಎಸ್ಟೇಟ್‌ನ ಆಡಳಿತ ಶೀಘ್ರದಲ್ಲೇ ಬದಲಾಗುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಕುಮಾರ್ ಮತ್ತು ಇತರ ಸಿಬ್ಬಂದಿಗಳು ತಮ್ಮ ಭವಿಷ್ಯದ ಬಗ್ಗೆ ಎರಡು ದಿನದ ಹಿಂದೆ ಚರ್ಚಿಸಿದ್ದರು ಎಂದು ಕುಮಾರ್ ಅವರ ಕುಟುಂಬದವರು ತಿಳಿಸಿದ್ದಾರೆ. ಕುಮಾರ್ ಸಾವಿನ ಹಿಂದೆ ಕೌಟುಂಬಿಕ ಕಲಹದ ಕಾರಣ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಜಯಲಲಿತಾ ಮತ್ತು ಹಾಲಿ ಎಐಎಡಿಎಂಕೆ ನಾಯಕಿ ಶಶಿಕಲಾ ಅವರು ಒಳಗೊಂಡಿರುವ ಅಕ್ರಮ ಆಸ್ತಿ ಪ್ರಕರಣದಲ್ಲಿ ಕೊಡನಾಡು ಎಸ್ಟೇಟ್ ಕೂಡಾ ಸೇರಿದೆ. ಎಪ್ರಿಲ್ 24ರಂದು ಎಸ್ಟೇಟ್‌ನ ಕಾವಲುಗಾರನನ್ನು ಉದಕಮಂಡಲಂನಲ್ಲಿ ಗುಂಪೊಂದು ಕೊಲೆ ಮಾಡಿತ್ತು. ಕೊಲೆ ಪ್ರಕರಣದಲ್ಲಿ ಒಳಗೊಂಡಿದ್ದ ಎಂದು ಶಂಕಿಸಲಾದ ವ್ಯಕ್ತಿಯೋರ್ವ ಬಳಿಕ ನಡೆದ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದ. ಇನ್ನೋರ್ವ ಶಂಕಿತ ಕೂಡಾ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರೆ, ಈತನ ಪತ್ನಿ ಮತ್ತು ಪುತ್ರಿ ಮೃತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News