ಮಾತನಾಡಿ ಬಗೆಹರಿಸಿಕೊಳ್ಳಿ: ಕತರ್‌ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೂಚನೆ
ವಿಶ್ವಸಂಸ್ಥೆ, ಜು. 4: ತನ್ನ ನೆರೆಯ ಅರಬ್ ದೇಶಗಳೊಂದಿಗೆ ಹೊಂದಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕತರ್‌ಗೆ ಸಲಹೆ ನೀಡಿದೆ ಎಂದು ವಿಶ್ವಸಂಸ್ಥೆಗೆ ಚೀನಾ ರಾಯಭಾರಿ ಲಿಯು ಜೀಯಿ ಹೇಳಿದ್ದಾರೆ.
ಇದರೊಂದಿಗೆ, ಈ ವಿವಾದದಲ್ಲಿ ತಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂಬ ಸೂಚನೆಯನ್ನು ವಿಶ್ವಸಂಸ್ಥೆ ನೀಡಿದೆ.
ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಅದರ ಅರಬ್ ನೆರೆಕರೆ ದೇಶಗಳಾದ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್‌ಗಳು ಜೂನ್ 5ರಂದು ಆ ದೇಶದೊಂದಿಗಿನ ಎಲ್ಲ ಸಂಪರ್ಕಗಳನ್ನು ಕಡಿದುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕತರ್ ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಅಲ್-ಥಾನಿ ಶುಕ್ರವಾರ ಭದ್ರತಾ ಮಂಡಳಿಯ ಸದಸ್ಯರನ್ನು ಭೇಟಿಯಾಗಿ ಬಿಕ್ಕಟ್ಟಿನ ಬಗ್ಗೆ ವಿವರಿಸಿದ್ದರು.
‘‘ಈ ಬಿಕ್ಕಟ್ಟನ್ನು ಪರಿಹರಿಸುವ ಅತ್ಯುತ್ತಮ ವಿಧಾನವೆಂದರೆ, ಇದಕ್ಕೆ ಸಂಬಂಧಪಟ್ಟ ದೇಶಗಳು ಪರಸ್ಪರ ಮಾತುಕತೆ ಮತ್ತು ಸಮಾಲೋಚನೆಗಳನ್ನು ನಡೆಸಿ ಒಮ್ಮತಕ್ಕೆ ಬರುವುದು. ಇದಕ್ಕೆ ಪರ್ಯಾಯ ಮಾರ್ಗ ಇದೆ ಎಂದು ನಮಗನಿಸುವುದಿಲ್ಲ’’ ಎಂದು ಚೀನಾ ರಾಯಭಾರಿ ಹೇಳಿದರು. ಅವರು ಈ ತಿಂಗಳು ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸುತ್ತಾರೆ.