ಜಮ್ಮು ಕಾಶ್ಮೀರ : ಜಿಎಸ್‌ಟಿ ಜಾರಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ

Update: 2017-07-04 14:16 GMT

ಶ್ರೀನಗರ, ಜು.4: ಜಮ್ಮು ಕಾಶ್ಮೀರ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ಸೌಲಭ್ಯದ ಮೇಲೆ ಪರಿಣಾಮ ಬೀರದಂತೆ ಜಿಎಸ್‌ಟಿಯನ್ನು ರಾಜ್ಯದಲ್ಲಿ ಜಾರಿಗೊಳಿಸುವ ಕುರಿತು ಸರಕಾರ ಮಂಡಿಸಿದ ಗೊತ್ತುವಳಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು.

  ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನಕ್ಕೆ ಯಾವುದೇ ರೀತಿಯಲ್ಲಿ ದಕ್ಕೆ ಬಾರದ ರೀತಿಯಲ್ಲಿ ರಾಜ್ಯದಲ್ಲಿ ಜಿಎಸ್‌ಟಿ ಜಾರಿಯ ಕುರಿತು ಶಾಸಕರು ಸೂಕ್ತ ಸಲಹೆ ನೀಡುವಂತೆ ಕೋರಿ ರಾಜ್ಯದ ವಿತ್ತ ಸಚಿವ ಹಸೀಬ್ ದ್ರಬು ಗೊತ್ತುವಳಿ ಮಂಡಿಸಿದರು.

 ಭಾರತದ ಒಕ್ಕೂಟ ವ್ಯವಸ್ಥೆಯಡಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ಸಂವಿಧಾನಾತ್ಮಕ ಹಕ್ಕು ಮತ್ತು ಜಮ್ಮು-ಕಾಶ್ಮೀರ ಸಂವಿಧಾನದಡಿ ನೀಡಲಾಗಿರುವ ಶಾಸನಾಧಿಕಾರವನ್ನು ಉಳಿಸಿಕೊಂಡು ಜಿಎಸ್‌ಟಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಶಾಸಕರು ಸಲಹೆ ನೀಡಬೇಕು ಎಂದು ಗೊತ್ತುವಳಿಯನ್ನು ಹಸೀಬ್ ಓದಿ ಹೇಳಿದರು. ಜಿಎಸ್‌ಡಿ ಜಾರಿಯ ಬಗ್ಗೆ ಸದನದ ಅಭಿಪ್ರಾಯ ಪಡೆಯಲು ಸರಕಾರ ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ . ಇಲ್ಲಿ ಯಾವುದೇ ಕಪಟ ನಾಟಕವಿಲ್ಲ. ಸದನದ ಸಲಹೆ ಪಡೆದು ಅದನ್ನು ಸರಕಾರದ ಮುಂದಿಡುವ ಪ್ರಯತ್ನ ನಮ್ಮದು . ಈ ನಿಟ್ಟಿನಲ್ಲಿ ಈಗಾಗಲೇ ಸರ್ವ ಪಕ್ಷಗಳ ಸಭೆ ಕರೆಯಲಾಗಿದೆ. ಅಲ್ಲದೆ ವಿಷಯದ ಬಗ್ಗೆ ಒಮ್ಮತಾಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಸರ್ವ ಪಕ್ಷಗಳನ್ನು ಒಳಗೊಂಡ ಒಂದು ಸಮಿತಿ ರೂಪಿಸಲಾಗಿದೆ ಎಂದವರು ಹೇಳಿದರು.

ಜಮ್ಮು-ಕಾಶ್ಮೀರ ವಿಧಾನಸಭೆಯ ನಿಯಮದ ಪ್ರಕಾರ ಒಂದು ನಿರ್ದಿಷ್ಟ ವಿಷಯಕ್ಕೆ ಮಾತ್ರ ಸಂಬಂಧಿಸಿ ಗೊತ್ತುವಳಿ ಮಂಡಿಸಬಹುದು. ಆದರೆ ಇಲ್ಲಿ ಸಂವಿಧಾತ್ಮಕ ವಿಷಯವೂ ಸೇರಿದಂತೆ ಬಹುವಿಷಯ ಒಳಗೊಂಡಿರುವ ಕಾರಣ ಈ ಬಗ್ಗೆ ಸ್ಪೀಕರ್ ರೂಲಿಂಗ್ ನೀಡಬೇಕು ಎಂದು ಮಾಜಿ ವಿತ್ತಸಚಿವ , ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕ ಮುಹಮ್ಮದ್ ಶಫಿ ಉರಿ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್, ಒಮ್ಮೆ ನೀಡಿದ ಆದೇಶ ಅಂತಿಮವಾಗಿದೆ. ಈ ಬಗ್ಗೆ ಕಾರಣ ಕೇಳಬಾರದು ಎಂದು ಸಂಸದೀಯ ಪದ್ದತಿಯಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News