ರಾಷ್ಟ್ರಪತಿಯಿಂದ ಪ್ರಶಸ್ತಿ ಪುರಸ್ಕೃತ ವೈದ್ಯನೇ ನಕಲಿ !

Update: 2017-07-05 10:33 GMT

ಕೊಲ್ಕತ್ತಾ,ಜು.5 : ನಿನ್ನೆ ಮೊನ್ನೆಯ ತನಕ ಅವರು ಪಶ್ಚಿಮ ಬಂಗಾಳದ ವೈದ್ಯಕೀಯ ಲೋಕದ ಗಣ್ಯಾತಿಗಣ್ಯರಾಗಿದ್ದರು. ನರೇನ್ ಪಾಂಡೆ ಖ್ಯಾತ ಅಲರ್ಜಿ ಹಾಗೂ ಅಸ್ತಮಾ ತಜ್ಞರಾಗಿ ನಗರದ ಪ್ರಮುಖ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಶುಭೇಂದು ಭಟ್ಟಾಚಾರ್ಯ ಅವರು ಕೂಡ ಜನಪ್ರಿಯ ವೈದ್ಯರಾಗಿದ್ದರಲ್ಲದೆ ಈ ವರ್ಷದ ಮೇ ತಿಂಗಳಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದಲೂ ಸನ್ಮಾನಿತರಾಗಿದ್ದರು. ಇಂಟಗ್ರೇಟಿವ್ ಆಂಕಾಲಜಿಯಲ್ಲಿ ಎಂಡಿ ಪದವಿ ಹೊಂದಿರುವ ಅರದೀಪ್ ಚಟರ್ಜಿ ಕೂಡ ಖ್ಯಾತ ವೈದ್ಯರಾಗಿದ್ದರಲ್ಲದೆ ತಮ್ಮ ವಿಲಾಸಿ ಜೀವನಕ್ಕಾಗಿಯೂ ಹೆಸರು ಪಡೆದವರಾಗಿದ್ದರು.

ಆದರೆ ಈ ಮೂವರೂ ಸೇರಿದಂತೆ ಮೂರು ಡಜನ್ ಇತರರು ನಕಲಿ ವೈದ್ಯಕೀಯ ಪದವಿ ಹೊಂದಿದ್ದಕ್ಕಾಗಿ ಈಗ ಜೈಲುಗಂಬಿ ಎಣಿಸುತ್ತಿದ್ದಾರೆ.

ಆಶ್ಚರ್ಯವೆಂದರೆ ಪಾಂಡೆ ಅವರು 12ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರಲ್ಲದೆ ವೈದ್ಯರ ಪಾತ್ರ ನಿರ್ವಹಿಸುವ ಮುನ್ನ ಯುನಾನಿ ಔಷಧಿ ವಿತರಕರಾಗಿ ತಮ್ಮ ವೃತ್ತಿ ಆರಂಭಿಸಿದ್ದರು. ಭಟ್ಟಾಚಾರ್ಯ ಅವರು ಯಾವುದೇ ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆದಿರಲಿಲ್ಲ, ಚಟರ್ಜಿ ಎರಡು ಬಾರಿ ಹೋಮಿಯೋಪತಿ ಕಾಲೇಜೊಂದರಿಂದ ಹೊರನಡೆದವರಾಗಿದ್ದರು.

ಯಾವುದೇ ಮಾನ್ಯತೆ ಪಡೆದ ವೈದ್ಯಕೀಯ ಪದವಿ ಇಲ್ಲದೇ ಇದ್ದರೂ ಕೆಲವೊಂದು ಅನಧಿಕೃತ ವೈದ್ಯಕೀಯ ಕಾಲೇಜುಗಳಿಂದಾಗಿ ಇವರೆಲ್ಲರೂ ಯಶಸ್ವೀ ವೈದ್ಯರಾಗಿ ಹೆಸರು ಪಡೆದಿದ್ದರು.

ಮೇ ತಿಂಗಳ ಮೊದಲ ವಾರದಲ್ಲಿ ಕುಶಿರಾಮ್ ಹಲ್ದಾರ್ ಹಾಗೂ ಕೈಝರ್ ಆಲಂ ಎಂಬ ಇಬ್ಬರು ವೈದ್ಯರನ್ನು ಅಲಿಪುರ್ದುವರ್ ಹಾಗೂ ಉತ್ತರ ದಿನಜಪುರ ಜಿಲ್ಲೆಗಳಿಂದ ಬಂಧಿಸಿದಾಗ ಈ ಜಾಲದ ಅಸಲಿಯತ್ತು ಬಯಲಾಗಿತ್ತು. ನಕಲಿ ಕಾಲೇಜುಗಳಿಂದ ಪದವಿ ಪಡೆದು ಇವರು ಸರಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೊಲ್ಕತ್ತಾದ ಖ್ಯಾತ ರೂಬಿ ಜನರಲ್ ಹಾಸ್ಪಿಟಲ್ ನಲ್ಲೂ ಆಲಂ ಸೇವೆ ಸಲ್ಲಿಸಿದ್ದರು.

ತನಿಖೆ ತೀವ್ರಗೊಂಡಂತೆ ಉತ್ತರ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ಫಲಕಟ ಎಂಬಲ್ಲಿನ ದಂತ ವೈದ್ಯ ಗೋಪಾಲ್ ಬಿಸ್ವಾಸ್ ಸಹಿತ ಹಲವು ಮಂದಿ ಇತರರು ಬಂಧನಕ್ಕೊಳಗಾಗಿದ್ದರು. ರಾಜ್ಯದಲ್ಲಿ ಕನಿಷ್ಠ 500ರಿಂದ 550 ನಕಲಿ ವೈದ್ಯರಿರಬಹುದೆಂದು ಪೊಲೀಸರು ಅಂದಾಜಿಸುತ್ತಾರೆ.

ಪೊಲೀಸರ ಎಫ್ ಐ ಆರ್ ನಲ್ಲಿ ಬರಾಸತ್ ನಲ್ಲಿರುವ ಆಲ್ಟರ್ನೇಟಿವ್ ಮೆಡಿಕಲ್ ಕೌನ್ಸಿಲ್ ಆಫ್ ಕೊಲ್ಕತ್ತಾ, ಭವಾನಿಪೋರ್ ಎಂಬಲ್ಲಿರುವ ಇಂಡಿಯನ್ ಬೋರ್ಡ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಬೆಹಾಲದ ಕೌನ್ಸಿಲ್ ಆಫ್ ಆಲ್ಟರ್ನೇಟಿವ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಹಾಗೂ ಬೌಬಜಾರಿನ ಇಂಡಿಯನ್ ಕೌನ್ಸಿಲ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಸೇರಿವೆ. ಯಾವುದೇ ಮಾನ್ಯತೆಯಿಲ್ಲದ ಈ ಸಂಸ್ಥೆಗಳು ಭಾರತ ಸಹಿತ ಅಮೆರಿಕಾ, ಇಟಲಿ, ರಷ್ಯ, ಶ್ರೀಲಂಕಾ, ನೇಪಾಳ ಹಾಗೂ ಬಾಂಗ್ಲಾದೇಶದ ಸಾವಿರಾರು ಮಂದಿಗೆ ನಕಲಿ ಪದವಿಗಳನ್ನು ನೀಡುತ್ತಿವೆ. ಯಾವುದೇ ತರಗತಿ ನಡೆಸದೆ ಕರೆಸ್ಪಾಂಡೆನ್ಸ್ ಕೋರ್ಸ್ ಮೂಲಕ ಪದವಿಗಳನ್ನು ದಯಪಾಲಿಸಲಾಗುತ್ತಿದೆ.

ಈ ನಕಲಿ ವೈದ್ಯರ ಹಾವಳಿಗೆ ಈಗ ರಾಜ್ಯ ಮೆಡಿಕಲ್ ಕೌನ್ಸಿಲ್ ಎಚ್ಚೆತ್ತುಕೊಂಡಿದ್ದು ಸಿಬಿಐ ಜತೆ ಸೇರಿಕೊಂಡು ಈ ನಕಲಿ ವೈದ್ಯರ ಬಂಡವಾಳ ಬಯಲು ಮಾಡುವುದಾಗಿ, ಕೌನ್ಸಿಲ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮೀಪವರ್ತಿ ನಿರ್ಮಲ್ ಮಜ್ಹಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News