ಬ್ರಿಟನ್: ಸಿಖ್ ಪೋಸ್ಟ್‌ಮಾಸ್ಟರ್ ಮೇಲೆ ಹಲ್ಲೆ
ಲಂಡನ್, ಜು. 5: ಬ್ರಿಟನ್‌ನಲ್ಲಿ ದರೋಡೆಕೋರನೊಬ್ಬ 67 ವರ್ಷದ ಸಿಖ್ ಪೋಸ್ಟ್‌ಮಾಸ್ಟರ್ ಒಬ್ಬರ ಕುತ್ತಿಗೆ ಮತ್ತು ತಲೆಗೆ ಚಾಕುವಿನಿಂದ ಇರಿದು ಅವರ ಪೇಟವನ್ನು ಹರಿದು ಹಾಕಿದ ಘಟನೆಯೊಂದು ವರದಿಯಾಗಿದೆ.
ಪೋಸ್ಟ್‌ಮಾಸ್ಟರ್ ಟರ್ಸೆಮ್ ತೆತಿ ಬರ್ಮಿಂಗ್‌ಹ್ಯಾಮ್‌ನ ಎರ್ಡಿಂಗ್ಟನ್ ಅಂಚೆಕಚೇರಿಯಲ್ಲಿದ್ದಾಗ ದಾಳಿ ನಡೆದಿದೆ. ದಾಳಿ ನಡೆದಂದಿನಿಂದ ತನ್ನ ಗಂಡ ಸಂಪೂರ್ಣ ಬದಲಾಗಿದ್ದಾರೆ ಎಂದು ಅವರ ಪತ್ನಿ ಕುಲ್ವಂತ್ ಹೇಳಿದ್ದಾರೆ.
ಘಟನೆ ಮಾರ್ಚ್‌ನಲ್ಲಿ ನಡೆದಿದೆಯಾದರೂ, ಆಘಾತಕಾರಿ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಈಗ ಬಿಡುಗಡೆ ಮಾಡಿದ್ದಾರೆ.
ಆರು ಇಂಚು ಚಾಕುವಿನಿಂದ ದುಷ್ಕರ್ಮಿಯು ತೆತಿ ಮೇಲೆ ದಾಳಿ ನಡೆಸುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.
‘‘ದಾಳಿಕೋರನು ಹಣ ಕೊಡು, ಕೀಗಳನ್ನು ಕೊಡು, ಇಲ್ಲದಿದ್ದರೆ ಕೊಲ್ಲುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದ. ಆತ ಹುಚ್ಚನಂತೆ ನನ್ನನ್ನು ಎಳೆದಾಡುತ್ತಿದ್ದ’’ ಎಂದು ತೆತಿ ಹೇಳುತ್ತಾರೆ.
ಪಕ್ಕದ ಕೋಣೆಯಲ್ಲಿದ್ದ ಅವರ ಪತ್ನಿ ಎಚ್ಚರಿಕೆ ಕರೆಗಂಟೆ ಬಾರಿಸಿದಾಗ ದುಷ್ಕರ್ಮಿಯು ಅಲ್ಲಿಂದ ಪರಾರಿಯಾದನು.