×
Ad

ಮೋದಿಯ ಇಸ್ರೇಲ್ ಭೇಟಿಯಿಂದ ಪ್ರಾದೇಶಿಕ ಭದ್ರತೆಗೆ ಅಪಾಯ: ಪಾಕ್ ಸಂಶಯ

Update: 2017-07-05 19:18 IST

ಇಸ್ಲಾಮಾಬಾದ್, ಜು. 5: ಪ್ರಧಾನಿ ನರೇಂದ್ರ ಮೋದಿಯ ಇಸ್ರೇಲ್ ಭೇಟಿಯನ್ನು ಪಾಕಿಸ್ತಾನವು ಸಂಶಯದಿಂದ ನೋಡುತ್ತಿದೆ ಹಾಗೂ ಈ ಪ್ರವಾಸವು ಈ ವಲಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ಭೀತಿಯನ್ನು ವ್ಯಕ್ತಪಡಿಸಿದೆ.

ಪ್ರಧಾನಿಯ ಈ ಭೇಟಿಯು ಭಾರತ ಮತ್ತು ಇಸ್ರೇಲ್ ನಡುವಿನ ರಕ್ಷಣಾ ಮತ್ತು ಸೇನಾ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಹಾಗೂ ಹಿಂದೆ ಉದ್ದೇಶಪೂರ್ವಕವಾಗಿ ರಹಸ್ಯವಾಗಿಟ್ಟ ಒಪ್ಪಂದಗಳನ್ನು ಈಗ ಸಾರ್ವಜನಿಕವಾಗಿ ಚರ್ಚಿಸಲಾಗುತ್ತದೆ ಎಂಬ ಅಭಿಪ್ರಾಯವನ್ನು ಮಾಜಿ ರಾಜತಾಂತ್ರಿಕರು ಮತ್ತು ರಕ್ಷಣಾ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಬುಧವಾರ ವರದಿ ಮಾಡಿದೆ.

ಇತರ ಸರಕಾರಗಳು ಮತ್ತು ದೇಶಗಳ ಮುಖ್ಯಸ್ಥರ ದ್ವಿಪಕ್ಷೀಯ ಭೇಟಿಗಳ ಬಗ್ಗೆ ಪಾಕಿಸ್ತಾನ ಅಧಿಕೃತವಾಗಿ ಹೇಳಿಕೆ ನೀಡುವುದಿಲ್ಲ, ಆದರೆ, ಮೋದಿಯ ಇಸ್ರೇಲ್ ಪ್ರವಾಸವು ವಲಯದ ಆಯಕಟ್ಟಿನ ಸ್ಥಿರತೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಮೋದಿ ಪ್ರವಾಸವನ್ನು ಅದು ನಿಕಟವಾಗಿ ಗಮನಿಸುತ್ತಿದೆ ಎಂದು ವಿದೇಶ ಸಚಿವಾಲಯದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿದರು.

ಭಾರತ ಮತ್ತು ಇಸ್ರೇಲ್ ನಡುವೆ ವಿಸ್ತಾರಣೆಗೊಳ್ಳುತ್ತಿರುವ ರಕ್ಷಣಾ ಸಹಕಾರವು ದಕ್ಷಿಣ ಏಶ್ಯದ ಭದ್ರತಾ ಸಮತೋಲನವನ್ನು ಹಾಳು ಮಾಡುತ್ತದೆ ಎಂದು ಅಂತಾರಾಷ್ಟ್ರೀಯ ವ್ಯವಹಾರಗಳ ಪರಿಣತ ಡಾ. ಝಫರ್ ನವಾಝ್ ಜಸ್ಪಾಲ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News