ಮೋದಿ ವಿರುದ್ಧ ಘೋಷಣೆ ಕೂಗಿದ ಶಿವಸೇನೆ ಕಾರ್ಯಕರ್ತರು
Update: 2017-07-05 22:18 IST
ಮುಂಬೈ, ಜು. 5: ಜಿಎಸ್‌ಟಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಬುಧವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿವಸೇನೆ ಹಾಗೂ ಬಿಜೆಪಿ ಕಾರ್ಯ ಕರ್ತರು ಘೋಷಣೆಗಳನ್ನು ಕೂಗಿ ಪರಸ್ಪರ ಕೈ ಮಿಸಲಾಯಿಸಿದ ಘಟನೆ ನಡೆದಿದೆ.
ಮುಂಬೈಯ ದಕ್ಷಿಣದಲ್ಲಿರುವ ಬೃಹನ್ಮುಂಬಯಿ ಮಹಾನಗರಪಾಲಿಕೆಯ ಕೇಂದ್ರ ಕಚೇರಿ ಒಳಗೆ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಹಣಕಾಸು ಹಾಗೂ ಯೋಜನಾ ಸಚಿವ ಸುಧೀರ್ ಮುಂಗಂಟಿವಾರ್ ಉಪಸ್ಥಿತರಿದ್ದ ಸಂದರ್ಭ ಹೊರಗೆ ಈ ಘಟನೆ ನಡೆದಿದೆ.
ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ ಎಂದು ಘೋಷಣೆಗಳನ್ನು ಕೂಗುತ್ತಿರುವಂತೆ, ಶಿವಸೇನೆ ಕಾರ್ಯಕರ್ತರು ಕಳ್ಳ, ಕಳ್ಳ ಎಂದು ಘೋಷಣೆಗಳನ್ನು ಕೂಗಿದರು.
ಆದಾಗ್ಯೂ, ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಕಿಶೋರಿ ಪಡ್ನೇಕರ್, ಬಿಜೆಪಿ ಕಾರ್ಪೋರೇಟರ್‌ಗಳು ಶಿವಸೇನೆ ಸ್ಥಾಪಕ ಬಾಳಾಸಾಹೇಬ್ ಠಾಕ್ರೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಬಿಜೆಪಿಯ ಕಾರ್ಪೊರೇಟರ್ ಮಾರ್ಕಂಡ್ ನರ್ವೇಕರ್ ಹಲ್ಲೆ ನಡೆಸಿದರು ಎಂದಿದ್ದಾರೆ.