ಮೋದಿ- ಕ್ಸಿ ಮಾತುಕತೆಗೆ ನಾವು ಕೋರಿಲ್ಲ: ಭಾರತ

Update: 2017-07-06 13:01 GMT

ಹೊಸದಿಲ್ಲಿ, ಜು.6: ಶುಕ್ರವಾರ ಹ್ಯಾಂಬರ್ಗ್‌ನಲ್ಲಿ ಆರಂಭವಾಗಲಿರುವ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ಮೋದಿ ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರೊಡನೆ ಮಾತುಕತೆ ನಡೆಸುವ ಸಾಧ್ಯತೆ ಇಲ್ಲ ಎಂದು ಭಾರತ ತಿಳಿಸಿದೆ.

 ಪ್ರಸಕ್ತ ಪರಿಸ್ಥಿತಿ ದ್ವಿಪಕ್ಷೀಯ ಮಾತುಕತೆಗೆ ಸೂಕ್ತವಾದುದಲ್ಲ ಎಂದು ಚೀನಾ ಗುರುವಾರ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತದ ಅಧಿಕಾರಿಯೋರ್ವರು , ನಾವು ಸಭೆ ನಡೆಯಬೇಕೆಂದು ಕೇಳಿಲ್ಲ. ಆದ್ದರಿಂದ ಪರಿಸ್ಥಿತಿ ಅನುಕೂಲಕರವೇ, ಅಲ್ಲವೇ ಎಂಬ ಮಾತಿಗೆ ಅರ್ಥವೇ ಇಲ್ಲ ಎಂದು ಹೇಳಿದ್ದಾರೆ.
 ಮೋದಿ ಮತ್ತು ಕ್ಸಿ ಜಿಂಪಿಂಗ್ ನಡುವೆ ಮಾತುಕತೆ ನಿರ್ಧರಿತವಾಗಿಲ್ಲ. ಪ್ರಸಕ್ತ ದೋಕ್ಲಮ್ ಪ್ರದೇಶದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಸೈನ್ಯಗಳೇ ಪರಿಹರಿಸಿಕೊಳ್ಳಲು ಉಭಯ ದೇಶಗಳು ಅವಕಾಶ ಮಾಡಿಕೊಡುವ ಸಂಭವವಿದೆ ಎಂದು ಭಾರತ ತಿಳಿಸಿದೆ.
 ಕಳೆದ ತಿಂಗಳು ಅಸ್ತಾನದಲ್ಲಿ ನಡೆದ ಶಾಂೈ ಸಹಕಾರ ಸಂಘಟನೆ ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಕ್ಸಿ ಜಿಂಪಿಂಗ್ ಸಕಾರಾತ್ಮಕ ಚರ್ಚೆ ನಡೆಸಿದ್ದರು. ಆದ್ದರಿಂದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ನಡೆಯಲಿರುವ ‘ಬ್ರಿಕ್ಸ್’ ಸಭೆಯಲ್ಲಿ ಕೂಡಾ ಉಭಯ ನಾಯಕರ ನಡುವೆ ಚರ್ಚೆ ನಡೆಯಲೂಬಹುದು ಎಂದು ಭಾರತದ ಅಧಿಕಾರಿ ತಿಳಿಸಿದ್ದಾರೆ.
ಸಿಕ್ಕಿಂ ಗಡಿ ಭಾಗದಲ್ಲಿ ಕಳೆದ ಮೂರು ವಾರಗಳಿಂದ ಭಾರತ-ಚೀನಾ ಸೇನಾಪಡೆಗಳು ‘ಮುಖಾಮುಖಿ’ ಸ್ಥಿತಿಯಲ್ಲಿದ್ದು ಬಿಕ್ಕಟ್ಟಿನ ಪರಿಸ್ಥಿತಿ ನೆಲೆಸಿದೆ. ಉಭಯ ದೇಶಗಳೂ ಪರಸ್ಪರ ರ ವಿರುದ್ಧ ಗಡಿದಾಟಿರುವ ಆರೋಪ ಮಾಡುತ್ತಿದ್ದು, ಚೀನಾದ ಸರಕಾರದ ನಿಯಂತ್ರಣದಲ್ಲಿರುವ ಮಾಧ್ಯಮಗಳು ಭಾರತದ ವಿರುದ್ಧ ಯುದ್ದ ಸಾರುವುದೇ ಸಮಸ್ಯೆ ಪರಿಹಾರಕ್ಕೆ ಉಳಿದಿರುವ ಏಕೈಕ ಆಯ್ಕೆಯಾಗಿವೆ ಎಂದು ಎಚ್ಚರಿಕೆ ನೀಡಿವೆ.
  ಚೀನಾದ ‘ದಿ ಗ್ಲೋಬಲ್ ಟೈಮ್ಸ್’ ಪತ್ರಿಕೆ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು, ಸಿಕ್ಕಿಂ ಪ್ರದೇಶವನ್ನು ಭಾರತದಿಂದ ಪ್ರತ್ಯೇಕಿಸಿ ಸ್ವತಂತ್ರಗೊಳಿಸಬೇಕು ಎಂದಿದೆ. ಅಲ್ಲದೆ ಭಾರತದೊಂದಿಗೆ ಯುದ್ದ ನಡೆಸಿ ಭಾರತ ಮತ್ತು ಭೂತಾನ್ ನಡುವೆ ಏರ್ಪಟ್ಟಿರುವ ‘ಅಕ್ರಮ’ ಒಪ್ಪಂದವನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದೆ.
 ಕೆಲವು ಭೂತಾನ್ ಮತ್ತು ಸಿಕ್ಕಿಂಗಳಲ್ಲಿ ಪ್ರಭಲ ಭಾರತ ವಿರೋಧಿ ಚಟುವಟಿಕೆ ಗೋಚರಿಸಬಹುದು. ಈಗಾಗಲೇ ಪ್ರಕ್ಷುಬ್ಧವಾಗಿರುವ ಭಾರತದ ಈಶಾನ್ಯ ಪ್ರದೇಶಗಳ ಮೇಲೆ ಇದು ಖುಣಾತ್ಮಕ ಪರಿಣಾಮ ಬೀರಬಹುದು ಮತ್ತು ಇದು ದಕ್ಷಿಣ ಹಿಮಾಲಯ ಪ್ರದೇಶದ ಭೂರಾಜಕೀಯವನ್ನು ತಿದ್ದಿ ಬರೆಯಲಿದೆ ಎಂದು ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News