ಬಿಹಾರ: ಮುಸ್ಲಿಂ ವಕೀಲ, ಪುತ್ರರು ಹಿಂದೂ ಧರ್ಮಕ್ಕೆ ಮತಾಂತರ

Update: 2017-07-06 13:15 GMT

ಪಾಟ್ನ, ಜು.6: ತನ್ನ ನೆರೆಕರೆಯ ಮುಸ್ಲಿಮರು ಕಿರುಕುಳ ನೀಡುತ್ತಿದ್ದಾರೆ ಎಂದು ಅರೋಪಿಸಿರುವ ಮುಸ್ಲಿಂ ವಕೀಲರೋರ್ವರು ತನ್ನ ಇಬ್ಬರು ಪುತ್ರರೊಂದಿಗೆ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

  ಬಿಹಾರದ ಬೆಗುಸರಾಯ್ ಜಿಲ್ಲೆಯ ಪೊಖಾರಿಯ ಎಂಬ ಗ್ರಾಮದ ನಿವಾಸಿ ಮುಹಮ್ಮದ್ ಅನ್ವರ್(46) , ವೇದ ಮಂತ್ರಗಳ ಪಠಣದ ಹಿಮ್ಮೇಳದಲ್ಲಿ ತನ್ನ ಪುತ್ರರಾದ 11ರ ಹರೆಯದ ಮುಹಮ್ಮದ್ ಅಮೀರ್ ಹಾಗೂ 9ರ ಹರೆಯದ ಮುಹಮ್ಮದ್ ಶಬೀರ್‌ರೊಂದಿಗೆ ಮತಾಂತರಗೊಂಡರು. ಇವರಿಗೆ ಕ್ರಮವಾಗಿ ಆನಂದ್ ಭಾರ್ತಿ, ಅಮನ್ ಭಾರ್ತಿ ಹಾಗೂ ಸುಮನ್ ಭಾರ್ತಿ ಎಂದು ನಾಮಕರಣ ಮಾಡಲಾಗಿದೆ.
      ಕಳೆದ 18 ವರ್ಷಗಳಿಂದ ಪೊಖಾರಿಯ ಗ್ರಾಮದಲ್ಲಿ 12 ಮುಸ್ಲಿಂ ಕುಟುಂಬಗಳಿರುವ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ. ತನ್ನ ನೆರೆಮನೆಯವರಾದ ಸಯ್ಯದ್ ಕುಟುಂಬದವರು ಇಸ್ಲಾಂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡಂತೆ ವರ್ತಿಸುತ್ತಿದ್ದಾರೆ. ಕ್ರಮಪ್ರಕಾರ ನಮಾಝ್ ಮಾಡುತ್ತಿಲ್ಲ ಎಂದು ಕಳೆದ ಏಳು ತಿಂಗಳಿಂದ ವಿನಾಕಾರಣ ತಗಾದೆ ತೆಗೆದು ತನಗೆ ಕಿರುಕುಳ ನೀಡುತ್ತಿದ್ದಾರೆ. ತಾನೋರ್ವ ಮಾನವತಾವಾದಿಯಾದ ಕಾರಣ ದೇವಸ್ಥಾನ ನಿರ್ಮಿಸಲು ದೇಣಿಗೆ ನೀಡಿದ್ದೇನೆ. ಇದು ್ನ ನೆರೆಕರೆಯ ಮುಸ್ಲಿಂ ಕುಟುಂಬಗಳ ಕಣ್ಣು ಕೆಂಪಾಗಿಸಿದೆ. ನೀನೇಕೆ ಗೋಮಾಂಸ ತಿನ್ನುತ್ತಿಲ್ಲ, ನಿನ್ನ ಮಕ್ಕಳನ್ನೇಕೆ ಮದರಸಕ್ಕೆ ಕಳುಹಿಸುತ್ತಿಲ್ಲ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ ಎಂದು ಅವರು ದೂರಿದ್ದಾರೆ.
     ತನ್ನನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ. ಇಸ್ಲಾಂ ಧರ್ಮದ ಸಂಪ್ರದಾಯಗಳನ್ನು ಪಾಲಿಸದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಜುಲೈ 2ರಂದು ಸುಮಾರು 40 ಮುಸ್ಲಿಮರು ಬೆದರಿಕೆ ಒಡ್ಡಿದ ಕಾರಣ ವಿಧಿಯಿಲ್ಲದೆ ತಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ. ಮತಾಂತರವಾಗುವಂತೆ ತನಗೆ ಯಾರೂ ಆಮಿಷ ಒಡ್ಡಿಲ್ಲ. 46ರ ಹರೆಯದವನಾದ ತನ್ನ ನಿರ್ಧಾರದ ಮೇಲೆ ಯಾರೂ ಪ್ರಭಾವ ಬೀರಲು ಆಗದು. ಮೂದಲಿಕೆಯಿಂದ ಉಸಿರುಕಟ್ಟಿದಂತಾಗಿದೆ. ನನ್ನ ಸ್ವಇಚ್ಛೆ ಯಿಂದ ನಿರ್ಧಾರ ಕೈಗೊಂಡಿರುವುದಾಗಿ ಅಫಿದವಿತ್ ಸಲ್ಲಿಸಿದ್ದೇನೆ ಎಂದವರು ಹೇಳಿದ್ದಾರೆ.
 ತಾನು ಇಸ್ಲಾಂ ಧರ್ಮವನ್ನು ತೊರೆಯಲು ಬಯಸಿದ್ದು ತನಗೆ ರಕ್ಷಣೆ ನೀಡುವಂತೆ ಅನ್ವರ್ ತಿಳಿಸಿದ್ದರು ಎಂದು ಜಿಲ್ಲಾ ಭಜರಂಗದಳ ಸಂಯೋಜಕ ಶುಭಂ ಭಾರದ್ವಾಜ್ ಹೇಳಿದ್ದಾರೆ. ಅನ್ವರ್‌ರಂತೆ ಹಲವು ಮಂದಿ ತಮ್ಮ ಸಂಘಟನೆಯ ಸಮಾಜಸೇವಾ ಕಾರ್ಯದಿಂದ ಪ್ರಭಾವಿತರಾಗಿದ್ದಾರೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News