×
Ad

ಇಸ್ರೇಲ್ ಪ್ರವಾಸದ 3ನೆ ದಿನ ಉಪ್ಪು ನೀರು ಶುದ್ಧೀಕರಣ ಘಟಕಕ್ಕೆ ಮೋದಿ ಭೇಟಿ

Update: 2017-07-06 20:04 IST

ಟೆಲ್ ಅವೀವ್, ಜು. 6: ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ಮೂರನೆ ದಿನವಾದ ಗುರುವಾರ ಓಲ್ಗಾ ಬೀಚ್‌ನಲ್ಲಿರುವ ಉಪ್ಪು ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದರು.

ಅಲ್ಲಿ ಅವರು ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಗಾಲ್-ಮೊಬೈಲ್ ಉಪ್ಪು ನೀರು ಶುದ್ಧೀಕರಣ ಘಟಕವು ಉನ್ನತ ಗುಣಮಟ್ಟದ ಕುಡಿಯುವ ನೀರನ್ನು ತಯಾರಿಸುತ್ತದೆ. ಪ್ರವಾಹ, ಭೂಕಂಪಗಳಂಥ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ, ಕಠಿಣ ಭೂಭಾಗಗಳಲ್ಲಿ ನೆಲೆಸಿರುವ ಸೈನಿಕರ ಬಳಕೆಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಳಕೆಗೆ ಈ ನೀರು ಯೋಗ್ಯವಾಗಿದೆ.
ಈ ಘಟಕವು ದಿನಕ್ಕೆ 20,000 ಲೀಟರ್‌ನಷ್ಟು ಸಮುದ್ರ ನೀರನ್ನು ಹಾಗೂ ದಿನಕ್ಕೆ 80,000 ಲೀಟರ್ ಕದಡಿದ ಅಥವಾ ಮಲಿನ ನದಿ ನೀರನ್ನು ಶುದ್ಧೀಕರಿಸುತ್ತದೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಟ್ಟಕ್ಕೆ ತರುತ್ತದೆ.

ಇದಕ್ಕೂ ಮೊದಲು ಮೋದಿ ಇಸ್ರೇಲ್‌ನ ಹೈಫ ನಗರದಲ್ಲಿರುವ ಭಾರತೀಯ ಸ್ಮಶಾನಕ್ಕೆ ಭೇಟಿ ನೀಡಿದರು. ಮೊದಲನೆ ಮಹಾಯುದ್ಧದಲ್ಲಿ ನಗರವನ್ನು ರಕ್ಷಿಸುತ್ತಾ ಒಟ್ಟೊಮನ್ ಸಾಮ್ರಾಜ್ಯದ ಪ್ರಬಲ ಸೇನೆಯ ವಿರುದ್ಧ ಹೋರಾಡಿ ಜೀವ ತೆತ್ತ ಭಾರತೀಯ ಸೈನಿಕರಿಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದರು.
ಇಲ್ಲಿ 44 ಭಾರತೀಯ ಸೈನಿಕರ ಸಮಾಧಿಗಳಿವೆ.

ಅಂತಿಮವಾಗಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಮೋದಿ ಜರ್ಮನಿಯ ಹ್ಯಾಂಬರ್ಗ್‌ಗೆ ಪ್ರಯಾಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News