ಪದ್ಮ ಪ್ರಶಸ್ತಿಗಳಿಗೆ 2,500ಕ್ಕೂ ಹೆಚ್ಚು ಅರ್ಜಿ
Update: 2017-07-06 23:08 IST
ಹೊಸದಿಲ್ಲಿ, ಜು.6: ಗಣರಾಜ್ಯೋತ್ಸವ ದಿನಾಚರಣೆಯ ಮುಂಚಿನ ದಿನ ಘೋಷಣೆಯಾಗಲಿರುವ 2018ನೇ ಸಾಲಿನ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಪದ್ಮಶ್ರೀ ಪುರಸ್ಕಾರಕ್ಕೆ ಇದುವರೆಗೆ 2,500ಕ್ಕೂ ಹೆಚ್ಚು ಅರ್ಜಿ ಸಲ್ಲಿಸಲಾಗಿದೆ. ಸೆಪ್ಟೆಂಬರ್ 15 ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿದೆ.
ಕಳೆದ ವರ್ಷ ಒಟ್ಟು 18,761 ಅರ್ಜಿ ಸಲ್ಲಿಸಲಾಗಿತ್ತು. ರಾಜ್ಯ ಸರಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಸಚಿವರು, ಭಾರತ ಸರಕಾರದ ಇಲಾಖೆಗಳು, ಭಾರತ ರತ್ನ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪಡೆದವರು, ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಂಸದರು, ಖಾಸಗಿ ವ್ಯಕ್ತಿಗಳು ಮತ್ತು ಖಾಸಗಿ ಸಂಸ್ಥೆಗಳು ಈ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಬಹುದಾಗಿದೆ.
ಸರಕಾರ ರೂಪಿಸಿದ ಪದ್ಮ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಈ ಪಟ್ಟಿಯನ್ನು ಪ್ರಧಾನಿ ರಚಿಸಿದ ಪದ್ಮ ಪ್ರಶಸ್ತಿ ಸಮಿತಿಯ ಮುಂದಿಡಲಾಗುವುದು. ಈ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುತ್ತದೆ.