ಫರಂಗಿಪೇಟೆ, ಮೆಲ್ಕಾರ್‌ನಲ್ಲಿ ಒಂದೂವರೆ ಗಂಟೆ ಕಾಲ ವಾಹನ ತಡೆದ ಪೊಲೀಸರು

Update: 2017-07-07 07:06 GMT

ಮಂಗಳೂರು, ಜು.7: ಹಿಂದೂ ಹಿತರಕ್ಷಣಾ ವೇದಿಕೆಯ ವತಿಯಿಂದ ಇಂದು ಬಿ.ಸಿ.ರೋಡ್‌ನಲ್ಲಿ ಹಮ್ಮಿಕೊಂಡ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ಮಂಗಳೂರು ಮತ್ತು ಕಲ್ಲಡ್ಕ ಕಡೆಯಿಂದ ಬಿ.ಸಿ.ರೋಡಿನತ್ತ ಸಂಚರಿಸುವ ಬಸ್ಸುಗಳ ಸಹಿತ ಖಾಸಗಿ ವಾಹನಗಳನ್ನು ಸುಮಾರು ಒಂದೂವರೆ ಗಂಟೆ ಕಾಲ ತಡೆಹಿಡಿದ ಪರಿಣಾಮ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.

ಸಜಿವಮುನ್ನೂರು ಗ್ರಾಮದ ಕಂದೂರು ನಿವಾಸಿ ಶರತ್ ಎಂಬಾತನ ಮೇಲೆ ದುಷ್ಕಮಿಗಳು ನಡೆಸಿರುವ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಹಿಂದೂ ಹಿತ ರಕ್ಷಣಾ ವೇದಿಕೆಯ ವತಿಯಿಂದ ಶುಕ್ರವಾರ ಬಿ.ಸಿ.ರೋಡ್ ಸರ್ವಿಸ್ ಬಸ್ಸು ನಿಲ್ದಾಣದ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ನೂರಾರು ಸಂಘಪರಿವಾರದ ಕಾರ್ಯಕರ್ತರು ಜಮಾಯಿಸಿದ್ದರಿಂದ ಈ ನಿಲ್ದಾಣಕ್ಕೆ ಬರುವ ಎಲ್ಲಾ ಬಸ್ಸುಗಳ ಸಹಿತ ಖಾಸಗಿ ವಾಹನಗಳನ್ನು ಫರಂಗಿಪೇಟೆ ಹಾಗೂ ಮೆಲ್ಕಾರ್‌ನಲ್ಲಿ ಪೊಲೀಸರು ತಡೆಹಿಡಿದ್ದಾರೆ.

ಮಂಗಳೂರಿನಿಂದ ಬಿ.ಸಿ.ರೋಡ್‌ಗೆ ಹೊರಟ ಖಾಸಗಿ, ಕೆಎಸ್ಸಾರ್ಟಿಸಿ ಬಸ್ಸುಗಳು, ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ಸಹಿತ ಎಲ್ಲಾ ವಾಹನಗಳನ್ನು ಈ ಎರಡೂ ಕಡೆಗಳಲ್ಲಿ ತಡೆ ಹಿಡಿದಿದ್ದರಿಂದ ಪ್ರಯಾಣಿಕರು ಕೆಲವು ಕಾಲ ಗೊಂದಲಕ್ಕೀಡಾದರು. ಈ ಬಗ್ಗೆ ಕೆಲವರಿಗೆ ಯಾವುದೇ ಮುನ್ಸೂಚನೆಯೂ ಇಲ್ಲದಿದ್ದುದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಬಿ.ಸಿ.ರೋಡ್‌ನಲ್ಲಿ ಪರಿಸ್ಥಿತಿ ಹತೋಟಿಗೆ ಬಂದ ಬಳಿಕ ಸುಮಾರು 12 ಗಂಟೆಯ ಹೊತ್ತಿಗೆ ವಾಹಗಳ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.

ಪೊಲೀಸ್ ಕ್ರಮಕ್ಕೆ ಅಸಮಾಧಾನ
ಸಂಘ ಪರಿವಾರದ ಪ್ರತಿಭಟನೆಗಾಗಿ ಫರಂಗಿಪೇಟೆ ಹಾಗೂ ಮೆಲ್ಕಾರ್‌ನಲ್ಲಿ ವಾಹನಗಳನ್ನು ತಡೆದ ಪೊಲೀಸರ ಕ್ರಮಕ್ಕೆ ಅಸಮಾಧಾನ ಆಕ್ರೋಶಗಳು ವ್ಯಕ್ತವಾಗಿದೆ. ಬಂಟ್ವಾಳ ತಾಲೂಕಿನಾದ್ಯಂತ ಸೆ.144 ಜಾರಿಯಲ್ಲಿದ್ದರೂ ಪ್ರತಿಭಟನೆಗೆ ಅವಕಾಶ ನೀಡಿರುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಸಾರ್ವಜನಿಕರಿಂದ ಕೇಳಿ ಬಂದಿದೆ.

ಮತ್ತೊಂಡೆದೆ ಬಿ.ಸಿ.ರೋಡ್‌ನಲ್ಲಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರ ಕ್ರಮವನ್ನು ಕೆಲವರು ಸ್ವಾಗತಿಸಿದ್ದಾರೆ. ಬಿ.ಸಿ.ರೋಡ್‌ಗೆ ಬರುವ ವಾಹನಗಳನ್ನು ತಡೆಯದಿರುತ್ತಿದ್ದರೆ, ಬಿ.ಸಿ.ರೋಡ್‌ನಲ್ಲಿ ಮತ್ತಷ್ಟು ಟ್ರಾಫಿಕ್ ಸಮಸ್ಯೆಯನ್ನು ಎದುರಿಸಬೇಕಾಗಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News