ಸೇನೆಯನ್ನು ಹಿಂದೆ ಪಡೆಯುವುದೇ ಮಾತುಕತೆಗೆ ಪೂರ್ವ ಶರತ್ತು: ಚೀನಾ ಮಾಧ್ಯಮ
ಬೀಜಿಂಗ್, ಜು. 8: ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಮ್ಮೇಳನದಲ್ಲಿ ನಡೆದ ‘ಬ್ರಿಕ್ಸ್’ ನಾಯಕರ ಅನೌಪಚಾರಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪರಸ್ಪರರನ್ನು ಅಭಿನಂದಿಸಿದ ಸ್ವಲ್ಪವೇ ಹೊತ್ತಿನ ಬಳಿಕ, ಚೀನಾದ ಸರಕಾರಿ ಒಡೆತನದ ಮಾಧ್ಯಮವು ಭಾರತದ ವಿರುದ್ಧ ಮತ್ತೆ ಹರಿಹಾಯ್ದಿದೆ.
ಉಭಯ ದೇಶಗಳ ನಡುವಿನ ಮಾತುಕತೆಗೆ ಪೂರ್ವಶರತ್ತಾಗಿ ಸಿಕ್ಕಿಂನ ಡಾಂಗ್‌ಲಾಂಗ್ ವಲಯದಿಂದ ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಅದು ಭಾರತವನ್ನು ಒತ್ತಾಯಿಸಿದೆ.
ಜಿ20 ಸಮ್ಮೇಳನದಲ್ಲಿ ಮೋದಿ ಮತ್ತು ಕ್ಸಿ ನಡುವೆ ನಡೆದ ವಿಸ್ತೃತ ಮಾತುಕತೆಗಳು, ಸಿಕ್ಕಿಂ ವಲಯದಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಉಂಟಾಗಿರುವ ಮೂರು ವಾರಗಳ ಅವಧಿಯ ಬಿಕ್ಕಟ್ಟು ಶಮನಗೊಳ್ಳುವ ಭರವಸೆಯನ್ನು ಹುಟ್ಟಿಸಿರುವುದನ್ನು ಸ್ಮರಿಸಬಹುದಾಗಿದೆ.
ಆದಾಗ್ಯೂ, ಭಾರತ ತನ್ನ ‘ಅತಿಕ್ರಮಣಕಾರಿ ಸೇನೆ’ಯನ್ನು ಹಿಂದಕ್ಕೆ ಪಡೆಯುವುದು ಎರಡು ದೇಶಗಳ ನಡುವಿನ ‘ಯಾವುದೇ ಅರ್ಥಪೂರ್ಣ ಮಾತುಕತೆಗೆ ಪೂರ್ವ ಶರತ್ತು ಆಗಿರುತ್ತದೆ’ ಎಂಬ ಹೇಳಿಕೆಯೊಂದನ್ನು ಚೀನಾದ ಅಧಿಕೃತ ವಾರ್ತಾ ಸಂಸ್ಥೆ ಕ್ಸಿನುವ ಪ್ರಕಟಿಸಿದೆ.
ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಪಡೆದುಕೊಂಡರೆ ಮಾತ್ರ ಈ ಬಿಕ್ಕಟ್ಟಿಗೆ ಪರಿಹಾರವೊಂದು ಸಾಧ್ಯ ಎಂಬ ಚೀನಾದ ನಿಲುವನ್ನು ಈ ಹೇಳಿಕೆ ದೃಢೀಕರಿಸಿದೆ.
ಭೂತಾನ್ ತನ್ನದೆಂದು ಹೇಳುವ ಡಾಂಗ್‌ಲಾಂಗ್ ಅಥವಾ ಡೋಕ್ಲಮ್‌ನಲ್ಲಿ ಚೀನಾದ ಸೇನೆ ನಿರ್ಮಿಸುತ್ತಿದ್ದ ರಸ್ತೆಯನ್ನು ಭಾರತೀಯ ಪಡೆಗಳು ನಿಲ್ಲಿಸಿದ ಬಳಿಕ ಜೂನ್ 16ರಂದು ಬಿಕ್ಕಟ್ಟು ಆರಂಭವಾಗಿದೆ.
ಭೂತಾನ್ ಸರಕಾರದ ಒಪ್ಪಿಗೆಯಿಂದ ತನ್ನ ಸೇನೆ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದೆ ಎಂದು ಭಾರತ ಹೇಳಿದೆ. ಯಥಾಸ್ಥಿತಿಯನ್ನು ಕಾಯ್ದುಕೊಂಡು ಬರುವಂತೆ ಭೂತಾನ್ ಮತ್ತು ಭಾರತ ಚೀನಾಕ್ಕೆ ಸೂಚಿಸಿವೆ.
‘‘ಡೋಕ್ಲಮ್ ಭೂತಾನಕ್ಕೆ ಸೇರಿದೆ ಎಂದು ಭಾರತ ಹೇಳುತ್ತಿದೆ ಹಾಗೂ ಭೂತಾನನ್ನು ರಕ್ಷಿಸುವ ಹೆಸರಿನಲ್ಲಿ ತನ್ನ ಅತಿಕ್ರಮಣವನ್ನು ಸಮರ್ಥಿಸಲು ಅದು ಪ್ರಯತ್ನಿಸುತ್ತಿದೆ’’ ಎಂದು ಕ್ಸಿನುವ ಹೇಳಿದೆ.
‘ಡೋಕ್ಲಮ್ ಚೀನಾಕ್ಕೆ ಸೇರಿದೆ’ ಎಂಬುದನ್ನು ಸಾಬೀತುಪಡಿಸಲು, ಅದು ಬ್ರಿಟನ್ ಮತ್ತು ಚೀನಾಗಳ ನಡುವೆ 1890ರಲ್ಲಿ ಏರ್ಪಟ್ಟ ಒಪ್ಪಂದವನ್ನು ಉಲ್ಲೇಖಿಸಿದೆ.
‘‘ಚೀನಾ-ಭೂತಾನ್ ಗಡಿ ವಿವಾದಲ್ಲಿ ಮಧ್ಯಪ್ರವೇಶಿಸಲು ಭಾರತಕ್ಕೆ ಹಕ್ಕಿಲ್ಲ. ಭೂತಾನ್ ಪರವಾಗಿ ಈ ವಿವಾದಾಸ್ಪದ ಜಮೀನಿನ ಬಗ್ಗೆ ವ್ಯವಹರಿಸಲು ಅದಕ್ಕೆ ಅಧಿಕಾರವಿಲ್ಲ’’ ಎಂದಿದೆ.