×
Ad

ಮುಂಬೈಯಲ್ಲಿ ಪೈಪ್‌ಲೈನ್ ಒಡೆದು ಇಬ್ಬರು ಮಕ್ಕಳ ಸಾವು: 20 ಲಕ್ಷ ಲೀಟರ್ ನೀರು ಪೋಲು

Update: 2017-07-08 19:23 IST

ಮುಂಬೈ, ಜು.8: ಬಾಂದ್ರಾದ ಕೊಳೆಗೇರಿ ಪ್ರದೇಶದಲ್ಲಿ ನೀರು ಸಾಗಿಸುವ ಪೈಪ್‌ಲೈನ್ ಒಡೆದು ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸಾವಿಗೀಡಾಗಿದ್ದು ಜೋಪಡಿಯೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

 ಶುಕ್ರವಾರ ಬೆಳಿಗ್ಗೆ 10:30ರ ವೇಳೆ ಈ ಘಟನೆ ಸಂಭವಿಸಿದೆ. ಬಾಂದ್ರಾದ ಇಂದಿರಾ ನಗರ ಕೊಳೆಗೇರಿ ಪ್ರದೇಶದಲ್ಲಿ ಇರುವ 92 ವರ್ಷಕ್ಕಿಂತಲೂ ಹಳೆಯ ನೀರಿನ ಪೈಪ್ ಒಡೆದು 20 ಲಕ್ಷ ಲೀಟರ್ ನೀರು ಪೋಲಾಗಿದೆ. ಕೊಳೆಗೇರಿಗೆ ರಭಸದಿಂದ ನೀರು ನುಗ್ಗಿದಾಗ ಜೋಪಡಿಯೊಂದರ ಎದುರುಗಡೆ ಆಟವಾಡುತ್ತಿದ್ದ 9ರ ಹರೆಯದ ಪ್ರಿಯಾಂಕ ಮತ್ತು ಆಕೆಯ ಸೋದರ ಎಂಟು ತಿಂಗಳ ಶಿಶು ವಿಗ್ನೇಶ್ ಮೃತಪಟ್ಟಿದ್ದಾರೆ. ಅಲ್ಲದೆ ಜೋಪಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಘಟನೆಯಿಂದ ಬಾಂದ್ರಾ ನಗರದ ಬಹುತೇಕ ಪ್ರದೇಶಗಳಲ್ಲಿ ನೀರು ಪೂರೈಕೆಗೆ ಅಡಚಣೆಯಾಗಿತ್ತು. ಶನಿವಾರ ದುರಸ್ತಿ ಕಾರ್ಯ ಮುಗಿದ ಬಳಿಕ ನೀರು ಪೂರೈಕೆ ಸುಗಮಗೊಂಡಿದೆ ಎಂದು ಮೂಲಗಳು ತಿಳಿಸಿವೆ.

 ಪೈಪ್‌ಲೈನ್ ಸಾಗಿಹೋಗುವ ಇಕ್ಕೆಲಗಳಲ್ಲಿ ಸುಮಾರು 2,000 ಕೊಳೆಗೇರಿ ನಿವಾಸಗಳಿದ್ದು ಇದರಲ್ಲಿ ಶೇ.90ರಷ್ಟು ಅಕ್ರಮ ಜೋಪಡಿಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವುಗಳನ್ನು ನೆಲಸಮ ಮಾಡಲು ಯೋಚಿಸಲಾಗಿದ್ದು ಅರ್ಹರಿಗೆ ಬದಲಿ ವ್ಯವಸ್ಥೆ ಮಾಡಲಾಗುವುದು. ಈ ಪ್ರದೇಶವನ್ನು ತೆರವುಗೊಳಿಸುವಂತೆ 2015ರಲ್ಲೇ ನೋಟಿಸ್ ಜಾರಿಮಾಡಲಾಗಿದ್ದರೂ ಇದಕ್ಕೆ ಯಾವುದೇ ಸ್ಪಂದನೆ ದೊರೆತಿಲ್ಲ . ಪೈಪ್‌ಲೈನ್ ಸಾಗುವ ದಾರಿಯುದ್ದಕ್ಕೂ ಪೈಪ್‌ಲೈನ್‌ಗೆ ತಾಗಿಕೊಂಡು ಗೋಡೆಯೊಂದನ್ನು ನಿರ್ಮಿಸುವ ಕಾರ್ಯ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News