ಶೃಂಗಸಭೆಯಲ್ಲಿ ‘ಅಪಾಯಕಾರಿ ಮೈತ್ರಿಕೂಟ’ಗಳ ರಚನೆ: ಪೋಪ್ ಕಳವಳ

Update: 2017-07-08 14:07 GMT

ರೋಮ್, ಜು. 8: ಜಿ20 ಶೃಂಗ ಸಮ್ಮೇಳನವು ವಿಶ್ವ ನಾಯಕರ ‘ಅತ್ಯಂತ ಅಪಾಯಕಾರಿ ಮೈತ್ರಿಕೂಟ’ಗಳಿಗೆ ವೇದಿಕೆಯಾಗುವ ಸಾಧ್ಯತೆಯಿರುವುದರಿಂದ ತಾನು ಕಳವಳಗೊಂಡಿದ್ದೇನೆ ಎಂದು ಪೋಪ್ ಫ್ರಾನ್ಸಿಸ್ ಶನಿವಾರ ಹೇಳಿದ್ದಾರೆ.

‘‘ಜಗತ್ತಿನ ಬಗ್ಗೆ ವಿಕೃತ ಕಲ್ಪನೆಗಳಿರುವ ದೇಶಗಳ ನಡುವೆ ಅತ್ಯಂತ ಅಪಾಯಕಾರಿ ಒಕ್ಕೂಟಗಳು ನಿರ್ಮಾಣವಾಗುವ ಬಗ್ಗೆ ನಾನು ವಿಚಲಿತನಾಗಿದ್ದೇನೆ’’ ಎಂದು ಇಟಲಿಯ ‘ಲಾ ರಿಪಬ್ಲಿಕ’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.

ಪೋಪ್ ಉಲ್ಲೇಖಿಸಿದ ಅಪಾಯಕಾರಿ ಮೈತ್ರಿಕೂಟಗಳು ಇಂತಿವೆ: ಅಮೆರಿಕ ಮತ್ತು ರಶ್ಯ, ಚೀನಾ ಮತ್ತು ಉತ್ತರ ಕೊರಿಯ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಸಿರಿಯ ಅಧ್ಯಕ್ಷ ಬಶರ್ ಅಲ್ ಅಸದ್ (ಸಿರಿಯ ಯುದ್ಧಕ್ಕೆ ಸಂಬಂಧಿಸಿ).

‘‘ಈ ಅಪಾಯವು ವಲಸೆಗೆ ಸಂಬಂಧಿಸಿದೆ. ಇಂದಿನ ಜಗತ್ತಿನ ಪ್ರಮುಖ ಸಮಸ್ಯೆಯೆಂದರೆ ಬಡವರು, ದುರ್ಬಲರು ಮತ್ತು ಹೊರತಳ್ಳಲ್ಪಟ್ಟವರು. ಇದರಲ್ಲಿ ವಲಸಿಗರೂ ಸೇರಿದ್ದಾರೆ’’ ಎಂದರು.

‘‘ಇದಕ್ಕಾಗಿಯೇ ಜಿ20 ಸಭೆಯ ಬಗ್ಗೆ ನನಗೆ ಹೆದರಿಕೆಯಾಗಿರುವುದು. ಅದು ವಲಸಿಗರನ್ನು ವಿರೋಧಿಸುತ್ತದೆ’’ ಎಂದರು.

ಜಗತ್ತಿನ ಅತ್ಯಂತ ಶ್ರೀಮಂತ ಖಂಡ ಯುರೋಪ್‌ಗೆ 2015ರಿಂದ ಲಕ್ಷಾಂತರ ನಿರಾಶ್ರಿತರು ಬರುತ್ತಿದ್ದಾರೆ. ಹಾಗೂ ಕೆಲವು ದೇಶಗಳು ಈಗಾಗಲೇ ನಿರಾಶ್ರಿತರನ್ನು ತಡೆಯುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ತಮ್ಮ ಗಡಿಗಳನ್ನು ಮುಚ್ಚಲು ಮುಚ್ಚಬಹುದು ಎಂಬ ಭ್ರಮೆಗೆ ಬಲಿಯಾಗಬೇಡಿ ಎಂಬ ಎಚ್ಚರಿಕೆಯನ್ನು ಪೋಪ್ ಫ್ರಾನ್ಸಿಸ್ ವಿಶ್ವ ನಾಯಕರಿಗೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News