ತಟಸ್ಥ ಇಂಟರ್‌ನೆಟ್ ಪರ ಗೂಗಲ್, ಫೇಸ್‌ಬುಕ್
Update: 2017-07-08 19:47 IST
ಸಾನ್‌ಫ್ರಾನ್ಸಿಸ್ಕೊ, ಜು. 8: ‘ತಟಸ್ಥ ಇಂಟರ್‌ನೆಟ್’ ಉಳಿಸಲು ಅಮೆರಿಕದಲ್ಲಿ ಜುಲೈ 12ರಂದು ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ತಂತ್ರಜ್ಞಾನ ದಿಗ್ಗಜ ಕಂಪೆನಿಗಳಾದ ಫೇಸ್‌ಬುಕ್ ಮತ್ತು ಗೂಗಲ್ ನಿರ್ಧರಿಸಿವೆ.
‘ಫೈಟ್ ಫಾರ್ ದ ಫ್ಯೂಚರ್’. ‘ಫ್ರೀ ಪ್ರೆಸ್’ ಮತ್ತು ‘ಡಿಮಾಂಡ್ ಪ್ರೊಗ್ರೆಸ್’ ಮುಂತಾದ ಮಾನವಹಕ್ಕು ಗುಂಪುಗಳು ಸಂಘಟಿಸಿರುವ ಪ್ರತಿಭಟನೆಗೆ, ಅಮೆಝಾನ್, ನೆಟ್‌ಫ್ಲಿಕ್ಸ್, ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ಎಸಿಎಲ್‌ಯು) ಹಾಗೂ ಇತರ ಸಂಘಟನೆಗಳು ಈಗಾಗಲೇ ಬೆಂಬಲ ಸೂಚಿಸಿವೆ.
ಅಮೆರಿಕದ ಫೆಡರಲ್ ಕಮ್ಯುನಿಕೇಶನ್ ಕಮಿಶನ್ (ಎಫ್‌ಸಿಸಿ)ನ ಇತ್ತೀಚಿನ ನಿಯಂತ್ರಣಕಾರಕ ವರ್ತನೆಯ ವಿರುದ್ಧ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ತನೆಯು ಹಲವಾರು ವರ್ಷಗಳಲ್ಲಿ ಆಗಿರುವ ಶಾಸನಾತ್ಮಕ ಪ್ರಗತಿಯನ್ನು ಹಿಂದಕ್ಕೆ ಪಡೆದುಕೊಳ್ಳಬಹುದು ಎಂಬ ಭೀತಿಯನ್ನು ಮುಕ್ತ ಇಂಟರ್‌ನೆಟ್ ಪರವಾಗಿರುವ ಸಂಘಟನೆಗಳು ವ್ಯಕ್ತಪಡಿಸಿವೆ.