ಪಾಕಿಸ್ತಾನಕ್ಕೆ ಹೋಗಲಾರೆವು, ಭಾರತ ನಮ್ಮ ತಾಯ್ನಾಡು: ಪೆಹ್ಲು ಖಾನ್ ಪುತ್ರ

Update: 2017-07-08 15:01 GMT

ಹೊಸದಿಲ್ಲಿ, ಜು.8: “ನಾವು ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಾರೆವು. ಭಾರತ ನಮ್ಮ ತಾಯ್ನಾಡು”. ಹೀಗೆಂದು ಹೇಳಿದವರು ಗೋರಕ್ಷಕ ದುಷ್ಕರ್ಮಿಗಳಿಂದ ಕೊಲೆಗೀಡಾದ ಕೃಷಿಕ ಪೆಹ್ಲು ಖಾನ್ ರ ಪುತ್ರ ಇರ್ಶಾದ್ ಖಾನ್.

ಹೊಸದಿಲ್ಲಿಯಲ್ಲಿ ಭೂಮಿ ಅಧಿಕಾರ್ ಆಂದೋಲನ್ ಹಮ್ಮಿಕೊಂಡಿದ್ದ ಕೃಷಿಕರ ಸಮಸ್ಯೆ, ಗೋ ರಾಜಕಾರಣ ಹಾಗೂ ಗೋರಕ್ಷಣೆ ಹೆಸರಿನ ಹತ್ಯೆ ವಿಚಾರದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಲೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಈ ಬಗ್ಗೆ ಸರಕಾರ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ. ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿದ್ದು, ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗುವಂತೆ ಹೇಳಲಾಗುತ್ತಿದೆ. ಆದರೆ ಹಿಂದೂ ಮತ್ತು ಮುಸ್ಲಿಮರು ದೇಶದಲ್ಲಿ ಶಾಂತಿಯುತವಾಗಿ ಬದುಕುತ್ತಿದ್ದಾರೆ ಎಂದರು.

“ವಿವಿಧ ಸಮುದಾಯಗಳು, ಧರ್ಮಗಳ ಜನರು ಸೌಹಾರ್ದತೆಯಿಂದ ಬದುಕುವುದು ಕೆಲ ವಿಚ್ಛಿದ್ರಕಾರಿ ಶಕ್ತಿಗಳಿಗೆ ಬೇಕಾಗಿಲ್ಲ. ಆದ್ದರಿಂದ ಓಟ್ ಬ್ಯಾಂಕ್ ರಾಜಕಾರಣ ನಡೆಯುತ್ತಿದೆ. ಕೊಲೆಗಳೂ ಜನರನ್ನು ವಿಭಜಿಸುವ ಉದ್ದೇಶದಿಂದಲೇ ನಡೆಯುತ್ತಿದೆ ಎಂದರು.

“ಅನೇಕ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಹಾಗೂ ನಿಂದಿಸಲಾಗುತ್ತಿದೆ. ಈ ಶಕ್ತಿಗಳು ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳುತ್ತಿದ್ದಾರೆ. ನಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ನಾನು ಇಲ್ಲೇ ಜನಿಸಿದವನು ಹಾಗೂ ಭಾರತ ನನ್ನ ತಾಯ್ನಾಡು” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News