ಜಾಗತಿಕ ಪರಮಾಣು ಅಸ್ತ್ರ ನಿಷೇಧ ಒಪ್ಪಂದಕ್ಕೆ ಅನುಮೋದನೆ

Update: 2017-07-08 16:56 GMT

ವಿಶ್ವಸಂಸ್ಥೆ, ಜು. 8: ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಇತರ ಪರಮಾಣು ಶಕ್ತ ದೇಶಗಳ ವಿರೋಧದ ಹೊರಾಗಿಯೂ, ಪರಮಾಣು ಅಸ್ತ್ರಗಳನ್ನು ನಿಷೇಧಿಸುವ ಜಾಗತಿಕ ಒಪ್ಪಂದವನ್ನು ವಿಶ್ವಸಂಸ್ಥೆ ಶುಕ್ರವಾರ ಅಂಗೀಕರಿಸಿದೆ.

ಒಪ್ಪಂದದ ಪರವಾಗಿ 122 ದೇಶಗಳು ಮತ ಹಾಕಿದರೆ, ನ್ಯಾಟೊ ಸದಸ್ಯ ನೆದರ್‌ಲ್ಯಾಂಡ್ಸ್ ವಿರುದ್ಧವಾಗಿ ಮತ ಚಲಾಯಿಸಿದೆ. ಸಿಂಗಾಪುರ ಗೈರುಹಾಜರಾಗಿದೆ.

ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿಪಡಿಸುವುದು, ಸಂಗ್ರಹಿಸುವುದು ಅಥವಾ ಅವುಗಳನ್ನು ಬಳಸುವ ಬೆದರಿಕೆಯೊಡ್ಡುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಒಪ್ಪಂದ ಅನುಮೋದನೆಗೊಂಡ ಬಳಿಕ ವಿಶ್ವಸಂಸ್ಥೆಯ ಸಮ್ಮೇಳನ ಸಭಾಂಗಣದಲ್ಲಿ ಭಾರೀ ಕರತಾಡನ ಮತ್ತು ಹರ್ಷೋದ್ಗಾರ ಕೇಳಿಬಂದವು.

ಒಪ್ಪಂದದ ಕರಡು ಸಿದ್ಧಪಡಿಸಲು ಮೂರು ವಾರಗಳ ಮಾತುಕತೆ ಪ್ರಕ್ರಿಯೆ ನಡೆದಿತ್ತು. ಆದರೆ, ಇದನ್ನು ಪರಮಾಣು ಶಕ್ತ ರಾಷ್ಟ್ರಗಳು ಬಹಿಷ್ಕರಿಸಿದ್ದವು.

ಒಪ್ಪಂದ ಅವಾಸ್ತವಿಕ ಹಾಗೂ 15,000ಕ್ಕೂ ಅಧಿಕ ಜಾಗತಿಕ ಪರಮಾಣು ಬಾಂಬ್‌ಗಳ ಸಂಗ್ರಹವನ್ನು ಕಡಿಮೆ ಮಾಡುವಲ್ಲಿ ಅದು ಯಾವುದೇ ದೇಣಿಗೆ ನೀಡುವುದಿಲ್ಲ ಎಂಬುದಾಗಿ ಪರಮಾಣು ಶಕ್ತ ದೇಶಗಳು ಹೇಳಿವೆ.

‘‘ಪರಮಾಣು ಅಸ್ತ್ರಗಳಿಂದ ಮುಕ್ತವಾದ ಜಗತ್ತಿನ ಪ್ರಥಮ ಬೀಜಗಳನ್ನು ಬಿತ್ತುವಲ್ಲಿ ನಾವು ಯಶಸ್ವಿಯಾಗಿದ್ದೇವೆ’’ ಎಂದು ಒಪ್ಪಂದದ ಬಗ್ಗೆ ಮಾತುಕತೆಗಳನ್ನು ನಡೆಸಿದ ವಿಶ್ವಸಂಸ್ಥೆಯ ಸಮಿತಿಯ ಅಧ್ಯಕ್ಷ ಹಾಗೂ ಕೋಸ್ಟರಿಕ ರಾಯಭಾರಿ ಎಲಾಯ್ನೆ ವೈಟ್ ಗೋಮ್ಸ್ ಹೇಳಿದರು.

ಆಸ್ಟ್ರಿಯ, ಬ್ರೆಝಿಲ್, ಮೆಕ್ಸಿಕೊ, ದಕ್ಷಿಣ ಆಫ್ರಿಕ ಮತ್ತು ನ್ಯೂಝಿಲ್ಯಾಂಡ್ ನೇತೃತ್ವದಲ್ಲಿ 141 ದೇಶಗಳು ಒಪ್ಪಂದವನ್ನು ರೂಪಿಸುವಲ್ಲಿ ಕೈಜೋಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News