ಮುಖ್ಯಮಂತ್ರಿಗಳೇ, ನಿಮಗೆ ದ.ಕ. ಜಿಲ್ಲೆಯ ಜನರ ಋಣವನ್ನು ತೀರಿಸುವ ಕೊನೆಯ ಅವಕಾಶ ಇದು...

Update: 2017-07-09 07:16 GMT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಅಸಾಧ್ಯವಾಗಿದೆಯೇ?, 'ಬುದ್ಧಿವಂತರ ಜಿಲ್ಲೆ' ಸಂಪೂರ್ಣವಾಗಿ ಗೂಂಡಾಗಳ ಸುಪರ್ದಿಗೆ ಸಿಕ್ಕಿದೆಯೇ?, ಇನ್ನು ಇಲ್ಲಿಯ ಕಾನೂನು ವ್ಯವಸ್ಥೆ ಮತಾಂಧ ರೌಡಿಗಳು ನಿರ್ಣಯಿಸಿದಂತೆಯೇ ನಡೆಯಲಿದೆಯೇ?, ಜಿಲ್ಲಾಡಳಿತ, ಕಮಿಷನರೇಟು, ಜಿಲ್ಲಾ ಪೊಲೀಸ್ ವ್ಯವಸ್ಥೆ, ಸರಕಾರ, ಮಂತ್ರಿಗಳು, ಶಾಸಕರು ಇವರೆಲ್ಲರೂ ಇರುವುದು ಕೇವಲ ನಾಮಕಾವಸ್ಥೆ ಮಾತ್ರವೇ?.

ಕಳೆದ ಒಂದೂವರೆ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅದರಲ್ಲೂ ವಿಶೇಷವಾಗಿ ಇಲ್ಲಿನ ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲೇ ನಿರಂತರ ನಡೆಯುತ್ತಿರುವ ಘಟನೆಗಳಿಂದಾಗಿ ಈಗ ಜಿಲ್ಲೆಯ ಜನರನ್ನು ಈ ಮೇಲಿನ ಪ್ರಶ್ನೆಗಳು ಕಾಡುತ್ತಿವೆ. ಮಂಗಳೂರಿನಿಂದ ಪುತ್ತೂರಿಗೆ ಹೊರಟವರು ಬಿ.ಸಿ. ರೋಡ್, ಕಲ್ಲಡ್ಕ, ಮಾಣಿ, ಪುತ್ತೂರುಗಳಲ್ಲಿರುವ ಸಂಬಂಧಿಕರು, ಮಿತ್ರರಿಗೆ ಫೋನ್ ಮಾಡಿ "ನಾವು ಇವತ್ತು ಹೊರಡಬಹುದೇ?" ಎಂದು ಕೇಳುತ್ತಾರೆ. ಇನ್ನು ಪುತ್ತೂರಿಂದ ಮಂಗಳೂರಿಗೆ ಹೊರಟವರದ್ದೂ ಇದೇ ಕತೆ. ಆಸುಪಾಸಿನ ಜಿಲ್ಲೆಗಳಿಂದ ಸಂಬಂಧಿಕರ ಮನೆಗೆ, ಕೆಲಸಕ್ಕೆ ಮಂಗಳೂರಿಗೆ ಬರುವವರು 'ಕೋಮು ಗಲಭೆಯ ಹವಾಮಾನದ ಮುನ್ಸೂಚನೆ' ಪಡೆಯದೇ ಹೊರಡುವ ಧೈರ್ಯ ತೋರಿಸುವುದಿಲ್ಲ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಜನರ ಪಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಸದಾ ಯುದ್ಧಕ್ಕೆ ಹೊರಟು ನಿಂತ ಯೋಧರಂತೆ ಕಾಣುತ್ತಿದ್ದಾರೆ. ಅವರ ಪ್ರಕಾರ ಮಂಗಳೂರಿನ ಬುದ್ಧಿವಂತರು ಈಗ ಪ್ಯಾಂಟು, ಶರ್ಟು ಮಾತ್ರ ಧರಿಸದೆ ತಲವಾರು ದಾಳಿಗಳನ್ನು ಎದುರಿಸಬಲ್ಲ "ಸೂಪರ್ ಮ್ಯಾನ್" ಕವಚಗಳನ್ನು ಧರಿಸುತ್ತಾರೆ. ಸದಾ ಎಚ್ಚರದಿಂದ ಅತ್ತಿತ್ತ ನೋಡುತ್ತಿರುತ್ತಾರೆ. ನಗುವುದನ್ನು ಬಿಟ್ಟೇ ಬಿಟ್ಟಿದ್ದಾರೆ. ಬೆಳಗ್ಗೆ ಮನೆಯಿಂದ ಕೆಲಸಕ್ಕೆಂದು ಹೊರಟ ಮನೆಯ ಯಜಮಾನ, ಕಾಲೇಜಿಗೆ ಹೋದ ಮಗ ಸಂಜೆ ನಡೆದುಕೊಂಡೇ ಮನೆಗೆ ಬರುತ್ತಾನೆಯೇ ಎಂದು ಮನೆಯವರಿಗೆ ಚಿಂತೆ. 

ಎಲ್ಲೋ ಕೂತು ಓದುತ್ತಿರುವವರಿಗೆ ಇದು ಅತಿಶಯೋಕ್ತಿಯಾಗಿ ಕಾಣಬಹುದು. ಆದರೆ ಮಂಗಳೂರಿನಲ್ಲೇ ಬದುಕುತ್ತಿರುವವರಿಗೆ ಇದು ಇಂದಿನ ಕಟು ಸತ್ಯ. ಇದರರ್ಥ ಮಂಗಳೂರು ಹಾಳಾಗಿ ಹೋಗಿದೆ ಎಂದಲ್ಲ. ಹಾಗಾದರೆ ಮಂಗಳೂರಿಗೆ ಭವಿಷ್ಯವಿಲ್ಲವೇ ಎಂದು ನೀವು ಕೇಳಿದರೆ ಅದಕ್ಕೂ ನಾನು ಇದೆ ಎಂದೇ ಹೇಳುತ್ತೇನೆ. ಆದರೆ ಮಂಗಳೂರನ್ನು, ದಕ್ಷಿಣ ಕನ್ನಡ ಜಿಲ್ಲೆಯನ್ನು ನಡೆಸುತ್ತಿರುವವರು ಅದನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ರಾಜ್ಯ ಮಾತ್ರವಲ್ಲ, ದೇಶಕ್ಕೆ ಮಾದರಿಯಾಗಿ ಬೆಳೆಯಬಲ್ಲ ಜಾಗತಿಕವಾಗಿ ಗುರುತಿಸಿಕೊಳ್ಳಬಲ್ಲ ಸಾಮರ್ಥ್ಯ ಇರುವ ಮಂಗಳೂರನ್ನು ಹೇಗಾದರೂ ಮಾಡಿ ಶಿಲಾಯುಗಕ್ಕೆ ತೆಗೆದುಕೊಂಡು ಹೋಗಲು ಇದನ್ನು ಆಳುತ್ತಿರುವವರು ನಿರ್ಧರಿಸಿದ್ದಾರೆ. ಇಲ್ಲದಿದ್ದರೆ, ಇತ್ತೀಚೆಗೆ ಮಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತಿರುವುದನ್ನು ಅವರು ಖಂಡಿತ ತಡೆಯುತ್ತಿದ್ದರು. ಆ ಸಾಮರ್ಥ್ಯ, ಅದಕ್ಕೆ ಬೇಕಾದ ವ್ಯವಸ್ಥೆ , ಅದನ್ನು ನಿಗ್ರಹಿಸಿ ಹೆಡೆಮುರಿ ಕಟ್ಟುವ ಬಲ, ಜಾಣ್ಮೆ ಎಲ್ಲವೂ ಅವರಲ್ಲಿದೆ. ಆದರೆ ಅವರಿಗದು ಬೇಕಾಗಿಲ್ಲ, ಅಷ್ಟೇ.

ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಇತ್ತೀಚಿಗೆ ಬದಲಾದರು. ಇವರಿಗಿಂತ ಮೊದಲಿದ್ದವರು ಕೆಟ್ಟವರೂ ಅಲ್ಲ, ಅದಕ್ಷರೂ ಅಲ್ಲ. ಈಗ ಬಂದಿರುವವರ ಬಗ್ಗೆ ಅಪಾರ ನಿರೀಕ್ಷೆ ಇತ್ತು. "ಅವರು ಬಿಡುವವರಲ್ಲ, ಭಾರೀ ಖಡಕ್ ಅಧಿಕಾರಿ ಇತ್ಯಾದಿ ಇತ್ಯಾದಿ"ಗಳು ಅವರು ಮಂಗಳೂರು ತಲುಪುವ ಮೊದಲೇ ಇಲ್ಲಿನ ಜನರನ್ನು ತಲುಪಿದ್ದವು. ಆದರೆ ಅವರು ಬಂದ ಮೇಲೂ ಅಮಾಯಕನ ಹೆಣ ಉರುಳಿದೆ. ನಿರಪರಾಧಿಗಳ ರಕ್ತ ಹರಿದಿದೆ. ಬಡವರ ಹೊಟ್ಟೆಪಾಡಿಗೆ ಕಲ್ಲು ಬಿದ್ದಿದೆ. ದುಡಿಯಲು ಹೊರಟವರು ಗಂಟೆಗಟ್ಟಲೆ ರಸ್ತೆಯಲ್ಲೇ ಪರದಾಡಿದ್ದಾರೆ. ಮಹಿಳೆಯರು-ಮಕ್ಕಳು ಭಯದಿಂದ ತಲ್ಲಣಿಸಿದ್ದಾರೆ. ಅಲ್ಲಿಗೆ ಅವರೂ ವಿಫಲರಾದರೆ ? ಅಥವಾ ಜಿಲ್ಲೆಯಲ್ಲಿ ಬೇರು ಬಿಟ್ಟಿರುವ ಕೋಮು ಭಾವನೆ ಬೆಳೆಸಿಕೊಂಡ, ಪೊಲೀಸ್ ಧರ್ಮವನ್ನು ಮರೆತಿರುವ ಪೊಲೀಸ್ ವ್ಯವಸ್ಥೆ ಅವರನ್ನು ಸಫಲರಾಗಲು ಬಿಡುತ್ತಿಲ್ಲವೇ?. 

ಎಲ್ಲ ಇತಿಮಿತಿಗಳ ಹೊರತಾಗಿಯೂ ನಮ್ಮ ಪೊಲೀಸ್ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದೆ, ಸುವ್ಯವಸ್ಥಿತವಾಗಿದೆ, ಸಮರ್ಥವಾಗಿದೆ. ಅಪರಾಧಗಳನ್ನು ನಿಯಂತ್ರಿಸಲು, ಅಪರಾಧಿಗಳನ್ನು ನಿಗ್ರಹಿಸಲು ಪೊಲೀಸ್ ಇಲಾಖೆ ಅತ್ಯಂತ ಶಕ್ತವಾಗಿದೆ. ಅದಕ್ಕೆ ಬೇಕಾದ ತಂತ್ರಗಾರಿಕೆ, ಚುರುಕುತನ, ಬಲ, ಮಾಹಿತಿ ಕಲೆಹಾಕುವ ಜಾಲ, ದುಷ್ಟರನ್ನು ಸದೆಬಡಿಯುವ ತಾಕತ್ತು, ಅಪಾಯ ತಪ್ಪಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು ಇವೆಲ್ಲವೂ ನಮ್ಮ ಪೊಲೀಸ್ ಇಲಾಖೆಯಲ್ಲಿದೆ. ಆದರೆ...

ಪೊಲೀಸ್ ಧರ್ಮವನ್ನು ಮಾತ್ರ ಪಾಲಿಸುವ, ನಿಯಮ-ಕಾನೂನುಗಳನ್ನು ಮಾತ್ರ ಅನುಸರಿಸುವ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವ್ಯವಸ್ಥೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪೊಲೀಸರು ಪೊಲೀಸ್ ಧರ್ಮವನ್ನು ಪಾಲಿಸಿದರೆ ಮತ್ತೆ ಅಪರಾಧಿಗಳಿಗೆ ಉಳಿಗಾಲವಿಲ್ಲ. ಪೊಲೀಸರು ಅದನ್ನು ಮರೆತು ಬಿಟ್ಟರೆ ಮತ್ತೆ ಜನರಿಗೆ ಉಳಿಗಾಲವಿಲ್ಲ. ಈಗ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯದ್ದೂ ಇದೇ ಸಮಸ್ಯೆ. ಇಲ್ಲಿನ ಪೊಲೀಸ್ ವ್ಯವಸ್ಥೆಗೆ ದುಷ್ಟರನ್ನು ಮಟ್ಟ ಹಾಕುವುದೇ ಬೇಕಾಗಿಲ್ಲ. ಹಾಗಾಗಿ ಎಷ್ಟು ಖಡಕ್ ಎಸ್ಪಿ ಬಂದರೂ ಅವರು ಇಲ್ಲಿನ ಪೊಲೀಸ್ ವ್ಯವಸ್ಥೆ ಎದುರು ಅಸಹಾಯಕರಾಗುತ್ತಾರೆ. ಆರ್ ಟಿಐ ಕಾರ್ಯಕರ್ತ ಬಾಳಿಗಾ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಮಂಗಳೂರು ಕಮಿಷನರ್ ಚಂದ್ರಶೇಖರ್ ಅವರಿಗೆ ಎದುರಾದ ಅತಿದೊಡ್ಡ ತಡೆಗಳಲ್ಲೊಂದು-ಅವರದೇ ಕೆಳಗಿರುವ ಪೊಲೀಸ್ ವ್ಯವಸ್ಥೆ. 

ಈಗ ನಿಷೇಧಾಜ್ಞೆ ಜಾರಿಯಲ್ಲಿರುವಾಗ ಸಂಘ ಪರಿವಾರದ ನಾಯಕರು ಸಾವಿರಾರು ಮಂದಿಯನ್ನು ಸೇರಿಸಿ ಪ್ರತಿಭಟನೆಯ ಹೆಸರಲ್ಲಿ ಸಂಭ್ರಮಾಚರಣೆ ಮಾಡುವುದೂ ಇದೇ ಪೊಲೀಸ್ ಧರ್ಮ ಮರೆತಿರುವ ದುರಂತದ ಭಾಗವಾಗಿದೆ. ನಿಷೇಧಾಜ್ಞೆ ಉಲ್ಲಂಘಿಸಿದ ಸಂಘಪರಿವಾರದ ಮುಖಂಡರು, ಕಾರ್ಯಕರ್ತರನ್ನು ಹಿಡಿದು ಜೈಲಿಗಟ್ಟಿ ಜನ ಸೇರದಂತೆ ಮಾಡಬೇಕಾದ ಪೊಲೀಸರು ತಮ್ಮ ಪಾಡಿಗೆ ಉದ್ಯೋಗ, ವ್ಯಾಪಾರ, ಕಾಲೇಜು ಎಂದು ಹೋಗುತ್ತಿರುವ ಜನಸಾಮಾನ್ಯರನ್ನು ಗಂಟೆಗಟ್ಟಲೆ ಬೀದಿಯಲ್ಲಿ ಬಿಸಿಲಿನಲ್ಲಿ ಒಣಗಿಸುತ್ತಾರೆ. ಐದು ಜನರು ಒಟ್ಟಿಗೆ ಸೇರಬಾರದು ಎಂದು ಆದೇಶ ಹೊರಡಿಸಿ ಎರಡು ಸಾವಿರ ಮಂದಿಯನ್ನು ಒಟ್ಟು ಸೇರಿಸಿ ಮೂಕಪ್ರೇಕ್ಷಕರಾಗುವುದಾದರೆ ನಿಷೇಧಾಜ್ಞೆ ಹಾಕಿದ್ದು ಯಾಕೆ ಸ್ವಾಮಿ?. ಶವದ ಮೆರವಣಿಗೆ ನಡೆಸಿದರೆ ಮೃತಪಟ್ಟ ಅಮಾಯಕನಿಗೆ ಅಥವಾ ಅವನ ಮನೆಯವರಿಗೆ ನಯಾಪೈಸೆಯ ಉಪಕಾರವಿಲ್ಲ. ಅದರಿಂದ ಇನ್ನಷ್ಟು ಅಮಾಯಕರ ಪ್ರಾಣಕ್ಕೆ ಅಪಾಯ ಎದುರಾಗುತ್ತದೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಬಾರಿ ಸಾಬೀತಾಗಿದೆ. ಆದರೂ ಶನಿವಾರ ಮಂಗಳೂರಿನಿಂದ ಬಂಟ್ವಾಳಕ್ಕೆ  ಶವದ ಜೊತೆ ನೂರಾರು ವಾಹನಗಳು, ಸಾವಿರಾರು ಜನರ ಮೆರವಣಿಗೆ ನಡೆಯಿತು. ಅದರ ಫಲಿತಾಂಶವೂ ಬಂತು. ಒಬ್ಬನಿಗೆ ಚೂರಿ ಇರಿತವಾಯಿತು, ಲಾಠಿ ಚಾರ್ಜ್ ಆಯಿತು, ರಸ್ತೆ ಬಂದ್ ಆಯಿತು, ಜನರು ಪರದಾಡಿದರು, ಕಂಗಾಲಾದರು, ಸಚಿವರು ಎಂದಿನಂತೆ ಹೇಳಿಕೆ ನೀಡಿದರು... ಇತ್ಯಾದಿ ಇತ್ಯಾದಿ. ಹೀಗೆ ಆಗುವುದಾದರೆ ಪೊಲೀಸರು ಮಾಡುವುದೇನು ?

ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸ್ಥಿತಿ ಇರುವಾಗ ಹೇಗೆ ಅದನ್ನು ನಿಭಾಯಿಸಬೇಕು ಎಂಬುದು ನಮ್ಮ ಪೊಲೀಸರಿಗೆ ಗೊತ್ತಿಲ್ಲ ಎಂದರೆ ಯಾರಾದರೂ ನಂಬಲು ಸಾಧ್ಯವೇ?. ರಾಜ್ಯದಲ್ಲಿ ಸರಕಾರ ಬದಲಾಗಿದೆ, ಆದರೆ ಜಿಲ್ಲೆಯಲ್ಲಿ?. ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಬಳಿಕ ಕರಾವಳಿಯ ಬಿಜೆಪಿ ಮುಖಂಡರೊಬ್ಬರು "ಹೌದು. ಪೊಲೀಸ್ ವ್ಯವಸ್ಥೆಯಲ್ಲಿ ನಮ್ಮವರನ್ನೇ (ಆರೆಸ್ಸೆಸ್) ತುಂಬಿದ್ದೇವೆ. ಏನಿವಾಗ..?"  ಎಂದಿದ್ದರು. ಅಂದರೆ ಕರಾವಳಿಯಲ್ಲಿ ಪೊಲೀಸ್ ವ್ಯವಸ್ಥೆಯ ಆರೆಸ್ಸೆಸ್ಸೀಕರಣ ಯೋಜನೆಯನ್ನು ಅವರು ಯಶಸ್ವಿಯಾಗಿ ಮುಗಿಸಿದ್ದಾರೆ. ಇಲ್ಲಿ ಬಿಜೆಪಿ ಸರಕಾರ ಬಂದರೂ ಕಾಂಗ್ರೆಸ್ ಬಂದರೂ ನಡೆಯುವುದು ಆರೆಸ್ಸೆಸ್ ದರ್ಬಾರ್. ಹಾಗಾಗಿ ಜಿಲ್ಲೆಯ ಇಡೀ ಪೊಲೀಸ್ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರದಿದ್ದರೆ ಎಷ್ಟು ಒಳ್ಳೆಯ ಎಸ್ಪಿ ಬಂದರೂ ಅಷ್ಟೇ. ಅಂತಹ ಸುವರ್ಣಾವಕಾಶವೊಂದು ಈಗಿನ ಉಸ್ತುವಾರಿ ಸಚಿವರಿಗಿತ್ತು. ಆದರೆ ಅವರಿಗೆ ಮರಳು ಮಾಫಿಯಾದ ಹಿಂಬಾಲಕರನ್ನು, ಭಾಷಣದಲ್ಲಿ ಮಾತ್ರ ಸಂಘಟನೆ ಮಾಡುವ ಉತ್ತರ ಕುಮಾರರನ್ನು ಸಂಭಾಳಿಸುವುದರಲ್ಲೇ ಸುಸ್ತಾಗಿ ಬಿಟ್ಟಿದೆ. ಅವರಿಂದ ಇಷ್ಟು ದೊಡ್ಡ ನಿರೀಕ್ಷೆ ಇಟ್ಟಿದ್ದೇ ನಮ್ಮ ದೊಡ್ಡ ಪ್ರಮಾದ.

ಮಾನ್ಯ ಮುಖ್ಯಮಂತ್ರಿಗಳೇ, ಈಗಲಾದರೂ ನಿಮಗೆ  ಅವಕಾಶವಿದೆ. ಬಹುತೇಕ ಎಂಟಕ್ಕೆ ಎಂಟು ಶಾಸಕರನ್ನು (ಒಬ್ಬರು ಕೇವಲ ಒಂದು ಸಾವಿರ ಓಟಿಗೆ ಸೋತವರು) ನಿಮಗೆ ಕೊಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರ ಋಣವನ್ನು ತೀರಿಸುವ ಕೊನೆಯ ಅವಕಾಶ ಇದು. ತಡಮಾಡದೆ ಕಾರ್ಯಪ್ರವೃತ್ತರಾಗಿ. ಕರಾವಳಿಯ ಫಲವತ್ತಾದ ಭೂಮಿಯಲ್ಲಿ ಹಲವಾರು ವರ್ಷಗಳಿಂದ ಬೇರು ಬಿಟ್ಟಿರುವ ಪೊಲೀಸ್ ಸಿಬ್ಬಂದಿಯ ಪಟ್ಟಿ ಮಾಡಿ, ಅವರಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸೇವೆ ಸಲ್ಲಿಸುವ ಅವಕಾಶ ಕೊಡಿ. ಹಾಗೆಯೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ದಕ್ಷ, ಜಾತ್ಯತೀತ ಪೊಲೀಸ್ ಸಿಬ್ಬಂದಿಗೆ ಕರಾವಳಿಯ ಮೀನಿನ ರುಚಿ ಸವಿಯಲು ಕಳಿಸಿಕೊಡಿ. ಎಸ್ಪಿ, ಡಿಸಿಗಳು ಈಗಿರುವವರು ಚೆನ್ನಾಗಿಯೇ ಇದ್ದಾರೆ. ಅವರಿಗೆ  ಸರಿಯಾದ ಬೆಂಬಲ, ಸಹಕಾರ ಕೊಡುವ ಸಿಬ್ಬಂದಿ ಒದಗಿಸಿದರೆ ಸಾಕು. ಜೊತೆಗೆ ಜಿಲ್ಲೆಗೆ ಒಬ್ಬ ದಕ್ಷ ಉಸ್ತುವಾರಿ ಸಚಿವರನ್ನು ನೇಮಿಸಿ. ಜಿಲ್ಲೆಯ ಜನರು ನಿಮ್ಮನ್ನು ಯಾವತ್ತೂ ಮರೆಯುವುದಿಲ್ಲ.

ಮುಖ್ಯಮಂತ್ರಿಗಳೇ, ಇದನ್ನು ನೀವು ಜನರಿಗಾಗಿ ಮಾಡದಿದ್ದರೆ ಕನಿಷ್ಠ ನಿಮ್ಮ ರಾಜಕೀಯ ಲಾಭಕ್ಕಾಗಿಯಾದರೂ ಮಾಡಿ. ನೀವು ಈಗಲಾದರೂ ಇಷ್ಟನ್ನಾದರೂ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅದಕ್ಕೆ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ. ಮಾತ್ರವಲ್ಲ, ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ. 

Writer - ವಸಂತ್ ಶೆಟ್ಟಿ, ಮಂಗಳೂರು

contributor

Editor - ವಸಂತ್ ಶೆಟ್ಟಿ, ಮಂಗಳೂರು

contributor

Similar News