ರೈಲ್ವೆ ನಿಲ್ದಾಣದಲ್ಲಿ ತ್ವರಿತ ಟಿಕೆಟ್ ತಪಾಸಣೆಗಾಗಿ ಬರಲಿವೆ ಬಾರ್ ಕೋಡೆಡ್ ಫ್ಲಿಪ್ ಗೇಟ್‌ಗಳು
ಹೊಸದಿಲ್ಲಿ,ಜು.9: ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್‌ಗಳ ತ್ವರಿತ ತಪಾಸಣೆಗಾಗಿ ಮತ್ತು ಟಿಟಿಇಗಳ ಮೇಲಿನ ಒತ್ತಡವನ್ನು ತಗ್ಗಿಸಲು ಹಾಗೂ ಟಿಟಿಇಗಳ ಕೊರತೆಯ ಸಮಸ್ಯೆಯಿಂದ ಪಾರಾಗಲು ಭಾರತೀಯ ರೈಲ್ವೆಯು ಮೆಟ್ರೋ ಮಾದರಿಯಲ್ಲಿ ಬಾರ್ ಕೋಡ್ ಸ್ಕಾನರ್‌ಗಳನ್ನು ಹೊಂದಿರುವ ಸ್ವಯಂಚಾಲಿತ ಫ್ಲಿಪ್ ಗೇಟ್ ಅಂದರೆ ತ್ವರಿತವಾಗಿ ತೆರೆದುಕೊಳ್ಳುವ ಮತ್ತು ಮುಚ್ಚಿಕೊಳ್ಳುವ ದ್ವಾರಗಳನ್ನು ಅಳವಡಿಸಲಿದೆ.
ಕೋಲ್ಕತಾ ಮತ್ತು ದಿಲ್ಲಿ ಮೆಟ್ರೋಗಳಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಈ ಫ್ಲಿಪ್ ಗೇಟ್‌ಗಳನ್ನು ಆರಂಭದಲ್ಲಿ ಕಡಿಮೆ ಜನದಟ್ಟಣೆಯಿರುವ ನಿಲ್ದಾಣಗಳಲ್ಲಿ ಸ್ಥಾಪಿಸಲಾಗುವುದು. ಪೈಲಟ್ ಯೋಜನೆಗಾಗಿ ದಿಲ್ಲಿ ವಿಭಾಗದ ಬ್ರಾರ್ ಸ್ಕ್ವೇರ್ ನಿಲ್ದಾಣವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಇದಕ್ಕಾಗಿ ರೈಲ್ವೆಯ ಸಾಫ್ಟ್‌ವೇರ್ ವಿಭಾಗವಾಗಿರುವ ಸಿಆರ್‌ಐಎಸ್ ಕಾರ್ಯನಿರತವಾಗಿದೆ. ಮುಂದಿನ ಮೂರು ತಿಂಗಳಲ್ಲಿ ಇಲ್ಲಿ ಫ್ಲಿಪ್ ಗೇಟ್‌ಗಳು ಕಾರ್ಯ ನಿರ್ವಹಿಸಲಿವೆ.
ಈ ವ್ಯವಸ್ಥೆಯ ವಿನ್ಯಾಸದಂತೆ ನಿಗದಿತ ನಿಲ್ದಾಣಕ್ಕೆ ಕಾದಿರಿಸಲಾಗಿರದ ಟಿಕೆಟ್‌ಗಳ ಮೇಲೆ ಬಾರ್ ಕೋಡ್‌ಗಳನ್ನು ಮುದ್ರಿಸಲಾಗುತ್ತದೆ ಮತ್ತು ಪ್ರಯಾಣಿಕರು ಒಳಗೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಈ ಟಿಕೆಟ್‌ಗಳನ್ನು ಫ್ಲಿಪ್ ಗೇಟ್‌ಗಳಲ್ಲಿ ಸ್ಕಾನ್ ಮಾಡಬೇಕಾಗುತ್ತದೆ. ಇದರಿಂದ ಹೆಚ್ಚಿನ ಸಂದಣಿ ಇರುವ ಸಂದರ್ಭ ಪ್ರಯಾಣಿಕರು ನಿಲ್ದಾಣವನ್ನು ತ್ವರಿತವಾಗಿ ಪ್ರವೇಶಿಸಲು ಅಥವಾ ನಿರ್ಗಮಿಸಲು ನೆರವಾಗುತ್ತದೆ.
ಸ್ವಯಂಚಾಲಿತ ಫ್ಲಿಪ್ ಗೇಟ್‌ಗೆ ಪ್ರತಿಯೊಂದಕ್ಕೆ ನಾಲ್ಕು ಲ.ರೂ.ಗಳು ವೆಚ್ಚವಾಗಲಿವೆ. ಜೊತೆಗೆ ಟಿಕೆಟ್ ಕೌಂಟರ್‌ಗಳಲ್ಲಿ ಬಾರ್ ಕೋಡೆಡ್ ಟಿಕೆಟ್‌ಗಳಿಗಾಗಿ ಥರ್ಮಲ್ ಪ್ರಿಂಟರ್‌ಗಳನ್ನೂ ಸ್ಥಾಪಿಸಲಾಗುವುದು ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.