ಹ್ಯಾಂಬರ್ಗ್‌ನಲ್ಲಿ ಪೊಲೀಸರೊಂದಿಗೆ ಪ್ರತಿಭಟನಾಕಾರರ ಬೀದಿಕಾಳಗ
ಹ್ಯಾಂಬರ್ಗ್,ಜು.9: ಜಿ20 ಶೃಂಗಸಭೆ ಮುಕ್ತಾಯದ ಬೆನ್ನಲ್ಲೇ ರವಿವಾರ ಹ್ಯಾಂಬರ್ಗ್ ನಗರದ ರಸ್ತೆಯಲ್ಲಿ ಭಾರೀ ಸಂಖ್ಯೆಯ ಪ್ರತಿಭಟನಾಕಾರರು ಪೊಲೀಸರೊಡನೆ ಕಾಳಗದಲ್ಲಿ ತೊಡಗಿದ್ದಲ್ಲದೆ, ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಎಡಪಂಥೀಯ ಹೋರಾಟಗಾರರ ಪ್ರಬಲವಾಗಿರುವ ಹ್ಯಾಂಬರ್ಗ್‌ನ ಶ್ಯಾನ್‌ಝೆನ್ ಪ್ರದೇಶದಲ್ಲಿ ಗಾಜಿನಬಾಟಲಿಗಳಿಂದ ಸಜ್ಜಿತರಾದ ನೂರಾರು ಮಂದಿ ವಾಹನಗಳನ್ನು ಗುರಿಯಿಟ್ಟು ದಾಳಿ ನಡೆಸಿದರು ಹಾಗೂ ಅವುಗಳಿಗೆ ಬೆಂಕಿ ಹಚ್ಚಿದರು.ಹಿಂಸಾನಿರತ ಪ್ರತಿಭಟನಾಕಾರರನ್ನು ಪೊಲೀಸರು ಜಲಫಿರಂಗಿ ಹಾಗೂ ಅಶ್ರುವಾಯು ಸಿಡಿಸಿ ಚದುರಿಸಲು ಯತ್ನಿಸಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರತಿಭಟನಾಕಾರರ ಜೊತೆ ನಡೆದ ಘರ್ಷಣೆಯಲ್ಲಿ ಹಲವಾರು ಭದ್ರತಾ ಅಧಿಕಾರಿಗಳಿಗೆ ಗಾಯಗಳಾಗಿವೆ ಮತ್ತು ಅನೇಕ ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಶನಿವಾರ ನೀಡಿದ ಅಂಕಿಅಂಶಗಳ ಪ್ರಕಾರ ಹ್ಯಾಂಬರ್ಗ್‌ನಲ್ಲಿ ಜಿ20 ಶೃಂಗಸಭೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ 213 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಹಾಗೂ 143 ಮಂದಿಯನ್ನು ಬಂಧಿಸಲಾಗಿದೆ.
ಜಾಗತೀಕರಣ ವಿರೋಧಿಸಿ ಸುಮಾರು 12 ಮಂದಿ ನಡೆಸಿದ ಶಾಂತಿಯುತ ರ್ಯಾಲಿಯನ್ನು ಪೊಲೀಸರು ತಡೆದ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು.