ಹರ್ಯಾಣ: ಬಿಜೆಪಿ ಸರಕಾರದ ಆದೇಶ ಪ್ರತಿಭಟಿಸಿ ಮುಖಪರದೆ ಧರಿಸಿ ಸುದ್ದಿ ಓದಿದ ಟಿವಿ ನಿರೂಪಕಿ
Update: 2017-07-10 21:53 IST
ಹರ್ಯಾಣ, ಜು.10: ಹರ್ಯಾಣ ಮೂಲದ ಟಿವಿ ವಾಹಿನಿಯೊಂದರ ನಿರೂಪಕಿ ಮುಖಪರದೆ ಧರಿಸಿ ಸುದ್ದಿ ಓದಿದ ವೀಡಿಯೊ ದೃಶ್ಯ ಈಗ ವೈರಲ್ ಆಗಿಬಿಟ್ಟಿದೆ.
ಮಹಿಳೆಯರು ತಮ್ಮ ಮುಖವನ್ನು ಪರದೆಯಿಂದ ಮುಚ್ಚಿಕೊಳ್ಳಬೇಕು ಎಂದು ರಾಜ್ಯ ಸರಕಾರ ನೀಡಿದ ಆದೇಶವನ್ನು ಪ್ರತಿಭಟಿಸಿ ತಾನು ಹೀಗೆ ಮಾಡಿರುವುದಾಗಿ ಹರ್ಯಾಣದ ಎಸ್‌ಟಿವಿ ವಾಹಿನಿಯಲ್ಲಿ ಸುದ್ದಿ ಓದುವ ಪ್ರತಿಮಾ ದತ್ತ ತಿಳಿಸಿದ್ದಾರೆ.
‘ಗೂಂಘಟ್’ (ಮುಖಪರದೆ) ರಾಜ್ಯದ ಅನನ್ಯತೆಯ ಪ್ರತೀಕವಾಗಿರುವ ಕಾರಣ ಎಲ್ಲಾ ಮಹಿಳೆಯರೂ ತಮ್ಮ ಮುಖವನ್ನು ಮುಖಪರದೆಯಿಂದ ಮುಚ್ಚಿಕೊಳ್ಳಬೇಕು ಎಂದು ಸರಕಾರದ ಪತ್ರಿಕೆಯಲ್ಲಿ ತಿಳಿಸಲಾಗಿದೆ.
‘ಬೇಟಿ ಬಚಾವೊ, ಬೇಟಿ ಪಡಾವೊ’ ಎಂಬ ಅಭಿಯಾನ ಘೋಷಿಸಿರುವ ಅದೇ ಬಿಜೆಪಿ ಸರಕಾರ, ರಾಜ್ಯದಲ್ಲಿರುವ ಮಹಿಳೆಯರ ಮುಖ ಪರದೆಯಿಂದ ಮುಚ್ಚಿರಬೇಕು ಎಂದು ಆಶಿಸುವುದು ಎಷ್ಟುಮಟ್ಟಿಗೆ ಸರಿ ಎಂದವರು ಪ್ರಶ್ನಿಸಿದ್ದಾರೆ. ರಾಜ್ಯ ಸರಕಾರದ ಆದೇಶಕ್ಕೆ ವಿರೋಧ ಪಕ್ಷ ಸೇರಿದಂತೆ ಹಲವರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.