ಉಪ್ಪಿನಂಗಡಿ: ಗ್ಯಾಸ್ ಸಾಗಾಟದ ಟೆಂಪೊ ಚಾಲಕನಿಗೆ ತಂಡದಿಂದ ಹಲ್ಲೆ

Update: 2017-07-11 05:58 GMT

ಉಪ್ಪಿನಂಗಡಿ, ಜು.11: ಗ್ಯಾಸ್ ಸಿಲಿಂಡರ್ ಸಾಗಾಟದ ಟೆಂಪೊವೊಂದರ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿ ಹಣ ದರೋಡೆಗೈದ ಘಟನೆ ಉಪ್ಪಿನಂಗಡಿ ಕಡವಿನಬಾಗಿಲು ಬಳಿಯ ಮೇದರಬೆಟ್ಟು ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.

ಮಠ ನಿವಾಸಿ ಅಬ್ದುರ್ರಹ್ಮಾನ್ ಯಾನೆ ಅದ್ದು ಹಲ್ಲೆಗೊಳಗಾದವರು. ಗ್ಯಾಸ್ ಸಿಲಿಂಡರ್ ಮನೆಗಳಿಗೆ ವಿತರಿಸುವ ಟೆಂಪೊದ ಚಾಲಕರಾಗಿರುವ ಇವರು ಎಂದಿನಂತೆ ಇಂದು ಮುಂಜಾನೆ 5:30ರ ಸುಮಾರಿಗೆ ಹೊರಟ ವೇಳೆ ಈ ಘಟನೆ ನಡೆದಿದೆ.

ಅಬ್ದುರ್ರಹ್ಮಾನ್ ಚಲಾಯಿಸುತ್ತಿದ್ದ ಟೆಂಪೊ ಮೇದರಬೆಟ್ಟು ತಲುಪಿದಾಗ ಓಮ್ನಿಯಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಟೆಂಪೊದ ಗಾಜನ್ನು ಪುಡಿಗೈದಿದ್ದಾರೆ. ಬಳಿಕ ಅಬ್ದುರ್ರಹ್ಮಾನ್ ಅವರನ್ನು ಟೆಂಪೊದಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಅವರ ಬಳಿಯಿದ್ದ ಒಂಬತ್ತು ಸಾವಿರ ರೂ. ನಗದನ್ನು ಹಲ್ಲೆಕೋರರು ದೋಚಿ ಪರಾರಿಯಾಗಿದ್ದರೆನ್ನಲಾಗಿದೆ. ಹಲ್ಲೆ ನಡೆಸಿದ ತಂಡದಲ್ಲಿ ನಾಲ್ವರು ಇದ್ದರೆನ್ನಲಾಗಿದೆ.

ಹಲ್ಲೆಯಿಂದ ಗಂಭೀರ ಗಾಯಗೊಂಡು ಬಿದ್ದಿದ್ದ ಅಬ್ದುರ್ರಹ್ಮಾನ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News